ವಜ್ರಮಹೋತ್ಸವ ಸಂಭ್ರಮದಲ್ಲಿ ಕಡಿಯಾಳಿ ಗಣೇಶೋತ್ಸವ

ಲೋಕಬಂಧು ನ್ಯೂಸ್ | ಉಡುಪಿ, ಸೆ.12
ಉಡುಪಿಯ ಅತ್ಯಂತ ಹಿರಿಯ ಸಾರ್ವಜನಿಕ ಗಣೇಶೋತ್ಸವವಾದ ಕಡಿಯಾಳಿಯ ಉಡುಪಿ ಸಾರ್ವಜನಿಕ ಗಣೇಶೋತ್ಸವ ಈ ಬಾರಿ ವಜ್ರಮಹೋತ್ಸವ (60ನೇ ವರ್ಷ) ಆಚರಿಸುತ್ತಿದ್ದು, ಸೆ.14ರಿಂದ 20ರ ವರೆಗೆ 7 ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ತಿಳಿಸಿದರು.
ಶನಿವಾರ ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.


ವಜ್ರಮಹೋತ್ಸವಕ್ಕೆ ಸಕಲ ಸಿದ್ಧತೆ 
ಕಡಿಯಾಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಲಾಗುತ್ತಿರುವ 60ನೇ ವರ್ಷದ ಶ್ರೀ ಗಣೇಶೋತ್ಸವ ಹಾಗೂ ವಜ್ರ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ಸಮಿತಿ ಗೌರವಾಧ್ಯಕ್ಷ ಹಾಗೂ ಉಡುಪಿ ಶಾಸಕ ಯಶಪಾಲ್ ಸುವರ್ಣ ತಿಳಿಸಿದರು.


13ರಂದು ವಿಗ್ರಹ ಮೆರವಣಿಗೆ
ಸೆ.13ರಂದು ಅಪರಾಹ್ನ 4.30ಕ್ಕೆ ಜೋಡುಕಟ್ಟೆಯಿಂದ ಗಣಪತಿ ವಿಗ್ರಹದ ಭವ್ಯ ಮೆರವಣಿಗೆ ನಡೆಯಲಿದೆ. ಟಿ.ಎಂ.ಎ. ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ್ ಉಮಾಕಾಂತ್ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.


ವಜ್ರ ಮಹೋತ್ಸವದ ವಿಶೇಷ ಆಕರ್ಷಣೆಯಾಗಿ  ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಳದ ಕಾತ್ಯಾಯಿನೀ ಮಂಟದಲ್ಲಿ ನಿರ್ಮಿಸಲಾದ ರಾಜದರ್ಬಾರ್ ಮಾದರಿಯ ಮಂಟಪದಲ್ಲಿ 7 ಅಡಿ 8 ಇಂಚು ಎತ್ತರದ ಗಣೇಶ ವಿಗ್ರಹವನ್ನು ಸೆ.14ರಂದು ಪ್ರತಿಷ್ಠಾಪಿಸಲಾಗುವುದು. ಏಳು ದಿನಗಳ ಕಾಲ ರಾಜನಂತೆ ವಿರಾಜಮಾನನಾಗಿರುವ ಗಣಪತಿ ಭಕ್ತರಿಗೆ ಅನುಗ್ರಹ ನೀಡಲಿದ್ದಾನೆ.


ಯುವಜನತೆಗೆ ಆದ್ಯತೆ
ಉತ್ಸವದ ಮುಂದಿನ ಹಂತಗಳಲ್ಲಿ ಯುವಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಬಾರಿಯ ಕಾರ್ಯಕ್ರಮಗಳಲ್ಲಿ ಯುವಜನತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.


ಧಾರ್ಮಿಕ ಭಾವನೆಗೆ ಮಹತ್ವ
ಗಣೇಶೋತ್ಸವದಲ್ಲಿ ಧಾರ್ಮಿಕ ಭಾವನೆ ಮತ್ತು ಭಕ್ತಿಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಸಿನಿಮಾ ಗೀತೆಗಳಿಗೆ ಅವಕಾಶ ಇಲ್ಲ. ಕಡಿಯಾಳಿಯನ್ನು ಸಂಪರ್ಕಿಸುವ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಸ್ವಾಗತ ಕಮಾನು ನಿರ್ಮಿಸಲಾಗಿದ್ದು ಫ್ಲೆಕ್ಸ್ ಬ್ಯಾನರ್, ಕೇಸರಿ ಧ್ವಜಗಳು ಹಾಗೂ ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗಿದೆ ಎಂದು ಯಶಪಾಲ್ ಸುವರ್ಣ ತಿಳಿಸಿದರು.


ಗಣಪತಿ ವಿಗ್ರಹವನ್ನು ಇಂದಿರಾನಗರದ ಎಂಜಿನಿಯ‌ರ್ ಸಂಪತ್ ರಾವ್ ಅವರು ನಿರ್ಮಿಸಿದ್ದು ಉಡುಪಿಯ ರಾಜ ಎಂದೇ ಕರೆಯಲ್ಪಡುವ ಉಡುಪಿ ಗಣೇಶ ವಿಗ್ರಹ ಚಿನ್ನದ ಕಿರೀಟ, ಚಿನ್ನದ ಪಾಶಾಂಕುಶ ಹಾಗೂ ಚಿನ್ನದ ಸರ ಹೊಂದಿದೆ. ಗಣಪತಿ ವಿಗ್ರಹವನ್ನು ಮೂರು ತಲೆಮಾರಿನಿಂದಲೂ ಒಂದೇ ಕುಟುಂಬದ ಕಲಾವಿದರು ನಿರ್ಮಿಸಿಕೊಡುತ್ತಿರುವುದು‌ ವಿಶೇಷ ಎಂದು ರಾಘವೇಂದ್ರ ಕಿಣಿ ತಿಳಿಸಿದರು.


ಸಾಮಾಜಿಕ ಕಾಳಜಿ
ಉಡುಪಿ ಜಿಲ್ಲೆಯ ಅತಿ ಹಿರಿಯ ಗಣಪತಿ ಸಮಿತಿಗಳಲ್ಲಿ ಒಂದಾಗಿರುವ ಕಡಿಯಾಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಈ ಹಿಂದೆ 50ನೇ ವರ್ಷದ ಸುವರ್ಣ ಮಹೋತ್ಸವವನ್ನು ಸಾಮಾಜಿಕ ಕಾಳಜಿಯೊಂದಿಗೆ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಆಚರಿಸಿತ್ತು. ಇದೀಗ 60ನೇ ವರ್ಷದ ವಜ್ರ ಮಹೋತ್ಸವದ ಸಂದರ್ಭದಲ್ಲಿಯೂ ಹಲವು ಸಾಮಾಜಿಕ ಯೋಜನೆಗಳನ್ನು ರೂಪಿಸಲಾಗಿದೆ. ಆಸರೆ ಟ್ರಸ್ಟ್ ಮೂಲಕ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ವಿದ್ಯುತ್ ಕಲ್ಪಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.


ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸೆ.14ರಂದು ಭಜನೆ, ದರ್ಪಣ ಡಾನ್ಸ್ ಗ್ರೂಪ್ ಬಳಗದವರಿಂದ ನೃತ್ಯ ಕಾರ್ಯಕ್ರಮ ರಾತ್ರಿ 7ರಿಂದ ಅಂಬಯ್ಯ ನುಲಿ ಮತ್ತು ಚಿದಾನಂದ ನುಲಿ ಅವರಿಂದ ವಚನ ಸಾಹಿತ್ಯ ಮತ್ತು ಭಕ್ತಿಗೀತೆ ಹಾಗೂ ಕಡಿಯಾಳಿ ಮಹಿಳಾ ಮಂಡಳಿಯವರಿಂದ ತುಳುನಾಡ ವೈಭವ ನಡೆಯಲಿದೆ.


ಸೆ.15ರಂದು ಯೂಟ್ಯೂಬ್ `ಚರಿತಾ' ತಂಡದ ಚಂದನಾ ಮುರಳೀಧರ್ ಮತ್ತು ಸುಪ್ರೀತಾ ಪ್ರದೀಪ್ ಅವರಿಂದ ಗಾಯನ ಹಾಗೂ ಅಂಬಾ ಭವಾನಿ ಆರ್ಟ್ಸ್ ನವರಿಂದ ದೇವಿ ಮಹಾತ್ಮೆ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ಸೆ.16ರಂದು ಬನ್ನಂಜೆ ಕಲಾಕೇಂದ್ರದವರಿಂದ ಭರತನಾಟ್ಯ ಹಾಗೂ ಸುಧೀರ್ ಕೊಡವೂರು ಬಳಗದವರಿಂದ `ನಾರಸಿಂಹ' ನೃತ್ಯರೂಪಕ, 17ರಂದು ಆಹ್ವಾನಿತ ಭಜನಾ ತಂಡದವರಿಂದ ರಾಜ್ಯ ಮಟ್ಟದ ಕುಣಿತ ಭಜನೆ, 18ರಂದು ತೆಂಕು ಮತ್ತು ಬಡಗುತಿಟ್ಟು ಕಲಾವಿದರಿಂದ ದೇವಿ ಮಹಾತ್ಮೆ ಯಕ್ಷಗಾನ, ರಾತ್ರಿ 8.30ರಿಂದ ವಿಶೇಷ ರಂಗಪೂಜೆ ನಡೆಯಲಿದೆ. ಸೆ.19ರಂದು ವಿಶೇಷ ಗಣಹೋಮ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಉಡುಪಿ ನಗರ ವ್ಯಾಪ್ತಿಯ 100ಕ್ಕೂ ಅಧಿಕ ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಗುರುತಿಸಿ ಗೌರವಿಸಲಾಗುವುದು. ಬಳಿಕ ಮಂತ್ರದೇವತೆ ಪೌರಾಣಿಕ ನಾಟಕ ಪ್ರದರ್ಶನ ಇರಲಿದೆ.


ಸೆ.20ರಂದು ಅಪರಾಹ್ನ 4ರಿಂದ ಜಲಸ್ತಂಭನ ಮೆರವಣಿಗೆ ನಡೆಯಲಿದ್ದು, ರಾತ್ರಿ 8 ಗಂಟೆಗೆ ಮಲ್ಪೆ ಕಡಲ ತೀರದಲ್ಲಿ ಗಣೇಶ ಮೂರ್ತಿ ವಿಸರ್ಜನೆ ನಡೆಯಲಿದೆ ಎಂದು ರಾಘವೇಂದ್ರ ಕಿಣಿ ತಿಳಿಸಿದರು.


ಪಾರ್ಕಿಂಗ್ ವ್ಯವಸ್ಥೆ
ಉತ್ಸವಕ್ಕೆ ಆಗಮಿಸುವ ಭಕ್ತರ ವಾಹನಗಳಿಗಾಗಿ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆ, ಯು. ಕಮಲಾಬಾಯಿ ಪ್ರೌಢಶಾಲೆ ಹಾಗೂ ಕುಂಜಿಬೆಟ್ಟು ಬಿಜೆಪಿ ಜಿಲ್ಲಾ ಕಚೇರಿ ಬಳಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಿಣಿ ತಿಳಿಸಿದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ.ವಸಂತ ಭಟ್, ವಜ್ರಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರೀಶ ಅಂಚನ್, ನಗರಸಭೆ ಮಾಜಿ ಸದಸ್ಯೆ ಗೀತಾ ಶೇಟ್ ಮತ್ತು ಸಮಿತಿ ಸದಸ್ಯ ಸತೀಶ ಕುಲಾಲ್ ಇದ್ದರು.