ಲೋಕಬಂಧು ನ್ಯೂಸ್ | ಉಡುಪಿ, ಸೆ.24
ಕನ್ನರ್ಪಾಡಿ- ಕಿನ್ನಿಮೂಲ್ಕಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಬಳಿಯ ಗಣಪತಿ ಮೈದಾನದಲ್ಲಿ ಆಯೋಜಿಸಲಾದ 21ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಾರೋಪ ಮಂಗಳವಾರ ನಡೆಯಿತು.
ಉದ್ಯಮಿ ಸುಭಾಷ್ ಎಂ.ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ ವಿದ್ಯಾನಿಧಿ ವಿತರಿಸಿದರು.
ಎಚ್.ಎಂ.ಟಿ ಮೋಟಾರ್ಸ್ ಮಾಲೀಕ ಗಣನಾಥ ಹೆಗ್ಡೆ, ಸುಂದರ ಶೆಟ್ಟಿ ಪಡುಮನೆ, ಪುರುಷೋತ್ತಮ ಮೆಂಡನ್, ಉದ್ಯಮಿ ಗುಣಕರ ಸನಿಲ್, ಉದ್ಯಮಿ ಅಭಿಜಿತ್ ಸುವರ್ಣ, ಕಿನ್ನಿಮುಲ್ಕಿ ಶ್ರೀ ವೀರಭದ್ರ ಶಾಮಿಯಾನ ಮಾಲೀಕ ವಿದ್ಯಾಚರಣ್ ಶೆಟ್ಟಿಗಾರ್, ಕಿನ್ನಿಮೂಲ್ಕಿ ವಿನಿ ಟೆಕ್ ಸಿಸ್ಟಮ್ಸ್ ಮಾಲೀಕ ಹರೀಶ್ ದೇವಾಡಿಗ, ಬ್ರಹ್ಮಗಿರಿಯ ಚಿಗುರು ಚಿತ್ರಕಲಾ ಕುಟೀರದ ಪ್ರವರ್ತಕ ಮಂಜುನಾಥ್ ಕೆ. ಬೈಲೂರು, ಪೀತಾಂಬರಿ, ಕಡೆಕಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ನಿರ್ಮಲಾ, ನಗರಸಭೆ ಮಾಜಿ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಸನ್ಮಾನ
ಕೈ ಬರಹ ಸಾಧಕ ಮಾರ್ಟಿನ್ ಜತ್ತನ್ನ, ಥಾಯ್ಲೆಂಡ್'ನಲ್ಲಿ ನಡೆದ ಜೂನಿಯರ್ ಮಾಡೆಲ್ ಇಂಟರ್ ನ್ಯಾಷನಲ್ ಸೌಂದರ್ಯ ಸ್ಪರ್ಧೆ ವಿಜೇತೆ ಸಚಿತಾ ರಾವ್ ಅವರನ್ನು ಸನ್ಮಾನಿಸಲಾಯಿತು. ಬೇಬಿ ಹಾಗೂ ಶೇಖರ್ ಆರೋಗ್ಯ ನಿಧಿ ಸ್ವೀಕರಿಸಿದರು. ಅಮೂಲ್ಯ ಪ್ರಾರ್ಥಿಸಿದರು ಮುರಳೀಧರ ರಾವ್ ಕಾರ್ಯಕ್ರಮ ನಿರೂಪಿಸಿದರು. ಹರ್ಷಿತಾ ವಿದ್ಯಾನಿಧಿ ಪಡೆದ ವಿದ್ಯಾರ್ಥಿಗಳ ಹೆಸರು ಓದಿ, ಸನ್ಮಾನಿತರನ್ನು ಪರಿಚಯಿಸಿದರು.
ಮಂಗಳವಾರ ಬೆಳಗ್ಗೆ ಕೃಷ್ಣಾನುಗ್ರಹ ಭಜನಾ ಮಂಡಳಿಯಿಂದ ಭಜನೆ, ಪ್ರತೀಕ್ಷಾ ರಿದಮಿಕ್ ವಾಯ್ಸ್ ಆಫ್ ಉಡುಪಿ ಅವರಿಂದ ಭಕ್ತಿ ಸಂಗೀತ, ಧೂಮ್ರವರ್ಣನಿಗೆ ಮಹಾಪೂಜೆ, ಹೂವಿನ ಪೂಜೆ, ರಂಗಪೂಜೆ ನೆರವೇರಿತು.
ಇಷಾರ್ಥ ಸಿದ್ಧಿ
ಸಮಿತಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. 10 ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳ ಜೊತೆಗೆ 1,000 ಪ್ರತಿಭೆಗಳಿಗೆ ಧೂಮ್ರವರ್ಣನ ಸನ್ನಿಧಿಯಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹರಕೆ ಹೊತ್ತು ವಿವಿಧೆಡೆಗಳಿಂದ ಆಗಮಿಸುವ ಭಕ್ತರ ಇಷ್ಟಾರ್ಥಗಳನ್ನು ಗಣಪತಿ ಈಡೇರಿಸಿದ್ದಾನೆ ಎಂದು ಕೃಷ್ಣಮೂರ್ತಿ ಆಚಾರ್ಯ ತಿಳಿಸಿದರು.
ಗಣಪನ ಬಳಿ ಬಂದ ಡಿಸಿಎಂ ಡಿಕೆಶಿ ಈಗ ಸಿಎಂ!
ಕಿನ್ನಿಮೂಲ್ಕಿ ಎಸ್.ಸಿ. ಕಾಲೊನಿಯಲ್ಲಿ ಸಮಿತಿಯ 20ನೇ ವರ್ಷದ ಸ್ಮರಣೆಗಾಗಿ ಬಡವರಿಗೆ ಮೂರು ಮನೆ ನಿರ್ಮಿಸುತ್ತಿದ್ದು ಡಿಸೆಂಬರ್'ನಲ್ಲಿ ಉದ್ಘಾಟನೆಗೆ ಸಿಎಂ ಡಿ.ಕೆ.ಶಿವಕುಮಾರ್ ಬರಲಿದ್ದಾರೆ. ಕಳೆದ ವರ್ಷ ಡಿಸಿಎಂ ಆಗಿ ಕಿನ್ನಿಮೂಲ್ಕಿ ಗಣಪನ ಬಳಿ ಬಂದಿದ್ದ ಡಿಕೆಶಿ, ಅಂದಿನ ಹಾರೈಕೆಯಂತೆ ಮುಖ್ಯಮಂತ್ರಿಯಾಗಿ ಹೆಬ್ರಿಗೆ ತೆರಳಿ ಕನ್ನರ್ಪಾಡಿ ಅಮ್ಮ ಮತ್ತು ಗಣಪನಿಗೆ ಕೈಮುಗಿದು ಸಾಗಿದ್ದಾರೆ ಎಂದು ಸಮಿತಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ ತಿಳಿಸಿದರು.
.jpg)