ಮೆಲ್ಬೋರ್ನ್‌ನಲ್ಲಿ ವೈಭವದ ರಾಘವೇಂದ್ರ ಸ್ವಾಮಿ ಆರಾಧನೆ, ಶ್ರೀಕೃಷ್ಣ ಲೀಲೋತ್ಸವ

ಲೋಕಬಂಧು ನ್ಯೂಸ್ ಉಡುಪಿ, ಸೆ.8
ಪುತ್ತಿಗೆ ಮಠದ ಶಾಖೆ ಮೆಲ್ಬೋರ್ನ್‌ನ ಶ್ರೀ ವೆಂಕಟಕೃಷ್ಣ ಬೃಂದಾವನದ ವತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಮತ್ತು ಶ್ರೀಕೃಷ್ಣ ಲೀಲೋತ್ಸವ ಶ್ರದ್ಧಾ ಭಕ್ತಿಯಿಂದ ವೈಭವದಿಂದ ನೆರವೇರಿತು.ನಗರದ ವಿವಿಧ ಭಾಗಗಳಿಂದ ಆಗಮಿಸಿದ 700ಕ್ಕೂ ಹೆಚ್ಚು ಭಕ್ತರು ಮಹೋತ್ಸವದಲ್ಲಿ ಪಾಲ್ಗೊಂಡು ಗುರುರಾಯರ ಅನುಗ್ರಹಕ್ಕೆ ಪಾತ್ರರಾದರು.ಶ್ರೀಕೃಷ್ಣ ದೇವರಿಗೂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳಿಗೂ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪೂಜೆ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಭಕ್ತಿಪೂರ್ವಕವಾಗಿ ನೆರವೇರಿದವು. ಪುತ್ತಿಗೆ ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ವಿದ್ವಾನ್ ಪ್ರಸನ್ನಾಚಾರ್ಯ ಸಮಾರಂಭದ ನೇತೃತ್ವ ವಹಿಸಿದ್ದರು.ಶ್ರೀ ವೆಂಕಟಕೃಷ್ಣ ಬೃಂದಾವನದ ಪ್ರಧಾನ ಅರ್ಚಕ ವಿಶ್ವನಾಥ ಆಚಾರ್ಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.ಆಸ್ಟ್ರೇಲಿಯಾದ ಪೌರತ್ವ, ಕಸ್ಟಮ್ಸ್ ಮತ್ತು ಬಹುಸಾಂಸ್ಕೃತಿಕ ವ್ಯವಹಾರಗಳ ಸಹಾಯಕ ಸಚಿವ ಹಾಗೂ ಅಂತರರಾಷ್ಟ್ರೀಯ ಶಿಕ್ಷಣದ ಸಹಾಯಕ ಸಚಿವ ಜೂಲಿಯನ್ ಹಿಲ್, ಸಂಸದ ಮತ್ತು ವಿಕ್ಟೋರಿಯಾ ರಾಜ್ಯದ ಪ್ರವಾಸೋದ್ಯಮ, ಕ್ರೀಡೆ ಮತ್ತು ಪ್ರಮುಖ ಕಾರ್ಯಕ್ರಮಗಳ ಸಚಿವ ಹಾಗೂ ವ್ಯಾಪಾರ ಮತ್ತು ಹೂಡಿಕೆ ಸಚಿವ ಸ್ಟೀವ್ ಡಿಮೋಪೌಲಸ್, ಸಂಸದ ಗ್ಲೆನ್ ವೇವರ್ಲಿ ಕ್ಷೇತ್ರದ ಜಾನ್ ಮುಲ್ಲಾಹಿ, ಸಂಸದ  ಮತ್ತು ಆಗ್ನೇಯ ಮೆಟ್ರೋಪಾಲಿಟನ್ ವಲಯದ ಲೀ ಟಾರ್ಲಾಮಿಸ್ ಓಅಮ್, ಮಹೋತ್ಸವದಲ್ಲಿ ಭಾಗವಹಿಸಿದರು.ಮಹೋತ್ಸವಕ್ಕೆ ಆಗಮಿಸಿದ ಗಣ್ಯ ಅತಿಥಿಗಳು ಮತ್ತು ಭಕ್ತರನ್ನು ಮಠದ ಪರವಾಗಿ ರಮೇಶ್, ಜಗನ್ಮೋಮೋಹನ್ ಹಾಗೂ ಅಶ್ವಿನ್ ಅವರು ಬರಮಾಡಿಕೊಂಡರು.


ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಸನ್ನಾಚಾರ್ಯ, ವಿವಿಧ ಸಮುದಾಯಗಳು ತಮ್ಮ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಗಳನ್ನು ಮುಕ್ತವಾಗಿ ಸಂರಕ್ಷಿಸಿ ಆಚರಿಸಲು ಅವಕಾಶ ಕಲ್ಪಿಸಿರುವ ಆಸ್ಟ್ರೇಲಿಯಾ ಸರ್ಕಾರದ ಬಹುಸಾಂಸ್ಕೃತಿಕ ನೀತಿ ಮತ್ತು ಸಹಕಾರವನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು. ಭಾರತೀಯ ಪರಂಪರೆಯನ್ನು ಉಳಿಸುವುದರೊಂದಿಗೆ ಆಸ್ಟ್ರೇಲಿಯಾದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಶ್ರೀ ವೆಂಕಟಕೃಷ್ಣ ಬೃಂದಾವನ ಅರ್ಥಪೂರ್ಣ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.


ಸಮಾರಂಭದಲ್ಲಿ ಮಾತನಾಡಿದ ಗಣ್ಯರು, ಕೋವಿಡ್ ಸಂಕಷ್ಟದ ಸಂದರ್ಭವೂ ಸೇರಿದಂತೆ ಹಲವು ವರ್ಷಗಳಿಂದ ಶ್ರೀ ವೆಂಕಟಕೃಷ್ಣ ಬೃಂದಾವನ ಮತ್ತು ಅದರ ಸ್ವಯಂಸೇವಕರು ಸಲ್ಲಿಸುತ್ತಿರುವ ಸಮಾಜ ಸೇವೆಯನ್ನು ಪ್ರಶಂಸಿಸಿದರು. ಬೃಂದಾವನ ಕೇವಲ ಆರಾಧನಾ ಕೇಂದ್ರವಾಗಿರದೆ ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ, ಸೇವೆ ಮತ್ತು ಸಾಮರಸ್ಯವನ್ನು ಪ್ರತಿನಿಧಿಸುವ ಪ್ರಮುಖ ಸಮುದಾಯ ಕೇಂದ್ರವಾಗಿ ಬೆಳೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.