ಸೆ.20: ಮಲ್ಪೆಯಲ್ಲಿ ಕಡಿಯಾಳಿ ಗಣೇಶ ವಿಗ್ರಹ ಜಲಸ್ತಂಭನ

ಲೋಕಬಂಧು ನ್ಯೂಸ್ | ಉಡುಪಿ, ಸೆ.20
ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಳದ ಕಾತ್ಯಾಯಿನಿ ಮಂಟಪದಲ್ಲಿ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿರುವ 60ನೇ ವರ್ಷದ ವೈಭವದ ವಿನಾಯ ಮೂರ್ತಿಯ ವಿಸರ್ಜನೆಯ ಭವ್ಯ ಮೆರವಣಿಗೆ ಸೆ.20ರಂದು ಅಪರಾಹ್ನ 4 ಗಂಟೆಗೆ ನಡೆಯಲಿದೆ. ಶ್ರೀ ಸಂಕಷ್ಟಹರ ಗಣಪತಿಯ ಮೂರ್ತಿಯನ್ನು ಮಲ್ಪೆ ಕಡಲ ಕಿನಾರೆಯ ಸೀ ವಾಕ್ ಬಳಿ ಕ್ರೇನ್ ಮೂಲಕ ಅರಬ್ಬೀ ಸಮುದ್ರದಲ್ಲಿ ಜಲಸ್ತಂಭನಗೊಳಿಸಲಾಗುವುದು.
ಕಡಿಯಾಳಿಯಿಂದ ಆರಂಭವಾಗುವ ಮೆರವಣಿಗೆ ಸ್ತಬ್ಧಚಿತ್ರಗಳು ಹಾಗೂ ಮಂಗಳವಾದ್ಯಗಳೊಂದಿಗೆ ಉಡುಪಿಯ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಲಿದೆ. ಕಲ್ಸಂಕ, ರಥಬೀದಿ, ಬಡಗುಪೇಟೆ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ಸಾಗಿದ ಬಳಿಕ ರಾತ್ರಿ ಸುಮಾರು 9.30 ಗಂಟೆಗೆ ಮಲ್ಪೆ ಸಮುದ್ರ ತೀರಕ್ಕೆ ಕೊಂಡೊಯ್ಯಲಾಗುವುದು.


ಮಲ್ಪೆ ಸಮುದ್ರ ತೀರದಲ್ಲಿ ಸಮುದ್ರರಾಜನಿಗೆ ವಿಶೇಷ ಆರತಿ ನೆರವೇರಿಸಿದ ಬಳಿಕ ಗಣಪತಿ ಮೂರ್ತಿಯ ಉತ್ತರಪೂಜೆ, ವಿಸರ್ಜನಾ ವಿಧಿ ಬಳಿಕ ಆರತಿ ಬೆಳಗಿ ಬಳಿಕ ಕ್ರೇನ್ ಮೂಲಕ ಜಲಸ್ತಂಭನಗೊಳಿಸಲಾಗುವುದು.


ಗಣಪತಿ ಮೂರ್ತಿ ವಿಸರ್ಜನೆ ಕಾರ್ಯಕ್ರಮದಂಗವಾಗಿ ವಿಶೇಷ ಸುಡುಮದ್ದು ಪ್ರದರ್ಶನ ಆಯೋಜಿಸಲಾಗಿದೆ. ಮಲ್ಪೆಯ ಮೀನುಗಾರ ಸಮುದಾಯದ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನಡೆಸಲಾಗುವುದು ಎಂದು ಸಮಿತಿ ತಿಳಿಸಿದೆ.


ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಹಾಗೂ ಸಮುದ್ರ ತೀರದ ಧಾರ್ಮಿಕ ಕಾರ್ಯಕ್ರಮದಲ್ಲಿ ಉಡುಪಿಯ ನಾಗರಿಕರು, ಭಕ್ತಾದಿಗಳು ಹಾಗೂ ಗಣೇಶ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ವೈಭವವನ್ನು ಕಣ್ತುಂಬಿಕೊಳ್ಳುವಂತೆ ಸಮಿತಿ ಮನವಿ ಮಾಡಿದೆ.