ಕ್ರೈಸ್ತ ಬಾಂಧವರಿಂದ ಸಂಭ್ರಮದ ಮೊಂತಿ ಫೆಸ್ತ್ ಆಚರಣೆ

ಲೋಕಬಂಧು ನ್ಯೂಸ್ ಉಡುಪಿ, ಸೆ.8
ಉಡುಪಿ ಜಿಲ್ಲೆಯ ಕ್ರೈಸ್ತ ಬಾಂಧವರು ಮಂಗಳವಾರ ಮಾತೆ ಮೇರಿ ಹುಟ್ಟುಹಬ್ಬ ಮತ್ತು ತೆನೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.ಚರ್ಚ್‌ಗಳಲ್ಲಿ ಹೊಸ ತೆನೆಗಳಿಗೆ ಪೂಜೆ, ವಿಶೇಷ ಪ್ರಾರ್ಥನೆ, ಮಾತೆ ಮೇರಿಯಮ್ಮ ಅವರ ಬಾಲರೂಪಕ್ಕೆ ಮಕ್ಕಳಿಂದ ಪುಷ್ಪಾರ್ಚನೆ ನಡೆದರೆ, ಮನೆ ಮನೆಗಳಲ್ಲಿ ಸಸ್ಯಾಹಾರಿ ಊಟ, ಹೊಸ ಅಕ್ಕಿಯ ಹಾಲು ಪಾಯಸದೂಟದೊಂದಿಗೆ ಸಂಭ್ರಮಿಸಿದರು.
ಕಳೆದ ಒಂಬತ್ತು ದಿನಗಳಿಂದ ಮಾತೆ ಮೇರಿಯ ಬಾಲರೂಪಿ ಪ್ರತಿಮೆಗೆ ಮಕ್ಕಳು ಸಲ್ಲಿಸುವ ಪುಷ್ಪಾರ್ಚನೆಯ ವೈಭವದ ಉತ್ತುಂಗ ರೂಪ ಪ್ರತೀ ಚರ್ಚ್‌ಗಳಲ್ಲಿ ಅನಾವರಣಗೊಂಡಿತು.ಗ್ರೊಟ್ಟೋದ ಮುಂಭಾಗದಲ್ಲಿ ಇರಿಸಿದ ಪ್ರತಿಮೆಗೆ ನೆರೆದ ಮಕ್ಕಳು, ಹಿರಿಯರು ಬಣ್ಣ ಬಣ್ಣದ ಪುಷ್ಪಗಳನ್ನು ಎರಚಿ ಭಕ್ತಿ, ಸಂತೋಷ ಮೆರೆದರು.ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದವು. ಧರ್ಮಗುರುಗಳು ತೆನೆ ಪೂಜೆ, ಬಲಿ ಪೂಜೆ ನೆರವೇರಿಸಿದರು.


ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿ'ಸೋಜಾ ಅನುಪಸ್ಥಿತಿಯಲ್ಲಿ, ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ  ನಿವೃತ್ತ ಧರ್ಮಾಧ್ಯಕ್ಷ ವಂ.ಡಾ‌ಜೆರಾಲ್ಡ್ ಐಸಾಕ್ ಲೋಬೊ ಹೊಸ ತೆನೆಯನ್ನು ಆಶೀರ್ವಚಿಸಿ ಹಬ್ಬದ ಪವಿತ್ರ ಬಲಿಪೂಜೆ ನೆರವೇರಿಸಿ ಹಬ್ಬದ ಸಂದೇಶ ನೀಡಿದರು.

ಮೊಂತಿ ಹಬ್ಬ ಧಾರ್ಮಿಕ ಮಹತ್ವ ಹೊಂದಿರುವ ಜೊತೆಗೆ ಕೃತಜ್ಞತೆ, ಕುಟುಂಬ, ಹಂಚಿಕೆ ಮತ್ತು ಪರಸ್ಪರ ಕಾಳಜಿಯಂಥ ಮೌಲ್ಯಗಳನ್ನು ಸಾರುವ ಸಾಂಸ್ಕೃತಿಕ ಪರಂಪರೆಯಾಗಿದೆ ಎಂದರು.


ಮೊಂತಿ ಹಬ್ಬದ ಆಚರಣೆ ಭೂಮಿಯೊಂದಿಗಿನ ನಮ್ಮ ಸಂಬಂಧವನ್ನೂ ನೆನಪಿಸುತ್ತದೆ. ಹೊಸ ಬೆಳೆ, ಫಲ-ಪುಷ್ಪ ಪ್ರಕೃತಿಯ ಔದಾರ್ಯ ಮತ್ತು ಶ್ರಮ ಜೀವನದ ಸಂಕೇತ ಎಂದರು.


ಉಡುಪಿ ಶೋಕಮಾತಾ ಚರ್ಚ್‌ನಲ್ಲಿ ಚರ್ಚಿನ ಧರ್ಮಗುರು ವಂ.ಡೆನಿಸ್ ಡೆಸಾ ನೇತೃತ್ವದಲ್ಲಿ ಹಬ್ಬದ ವಿಶೇಷ ಬಲಿಪೂಜೆ ನೆರವೇರಿತು. ವಂ.ಪ್ರವೀಣ್ ಲಿಯೋ ಹಾಗೂ ವಂ.ವಿಜಯ್ ಡಿ'ಸೋಜಾ ಉಪಸ್ಥಿತರಿದ್ದರು.


ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಹಾಗೂ ಚರ್ಚಿನ ರೆಕ್ಟರ್ ಮೊನ್ಞಿಂಜ್ಞೋರ್ ಫ್ರಾನ್ಸಿಸ್ ಲೂವಿಸ್ ಹೊಸ ತೆನೆಯನ್ನು ಆಶೀರ್ವಚಿಸಿ ಪವಿತ್ರ ಬಲಿಪೂಜೆ ಅರ್ಪಿಸಿದರು.


ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದಲ್ಲಿ ವಂ.ಆಲ್ಬನ್ ಡಿ'ಸೋಜಾ, ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ವಂ.ಪಾವ್ಲ್ ರೇಗೊ, ಶಿರ್ವ ಆರೋಗ್ಯ ಮಾತಾ ಚರ್ಚ್‌ನಲ್ಲಿ ವಂ.ಚಾರ್ಲ್ಸ್ ಮಿನೇಜಸ್ ಸೇರಿದಂತೆ  ಇನ್ನಿತರ ಚರ್ಚುಗಳಲ್ಲಿ ಕೂಡ ತೆನೆಹಬ್ಬ ಮತ್ತು ಮಾತೆ ಮೇರಿ ಜನ್ಮದಿನ ಆಚರಿಸಲಾಯಿತು.


ಭತ್ತದ ತೆನೆ ಮತ್ತು ಕಬ್ಬನ್ನು ಗುರಿಕಾರರು ಚರ್ಚ್‌ಗೆ ಮ‌ರವಣಿಗೆಯಲ್ಲಿ ಕೊಂಡೊಯ್ದರು. ಅಲ್ಲಿ ಧರ್ಮಗುರುಗಳು ತೆನೆ ಪೂಜೆ ನಡೆಸಿ ಭಕ್ತರಿಗೆ ಹಂಚಲಾಯಿತು. ಭತ್ತದ ತೆನೆಯನ್ನು ಮನೆಗೆ ಕೊಂಡೊಯ್ದ ದೇವರ ಪೀಠದ ಮೇಲಿರಿಸಿ ಪ್ರಾರ್ಥನೆ ಸಲ್ಲಿಸಿದರು. ಭತ್ತದ ಕಾಳನ್ನು ಕುಟ್ಟಿ ಪುಡಿ ಮಾಡಿ ಹಾಲು, ತೆಂಗಿನ ಹಾಲು, ಪಾಯಸದ ಮೂಲಕ ಹೊಸ ಅಕ್ಕಿಯ ಊಟ ಸವಿದರು. ಸಂಪೂರ್ಣ ಶಾಖಾಹಾರಿ ಆಹಾರ ವಿಶೇಷವಾಗಿತ್ತು.