ಕಸ್ತೂರಿ ರಂಗನ್ ವರದಿ: ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ

ಲೋಕಬಂಧು ನ್ಯೂಸ್ | ಹೆಬ್ರಿ, ಸೆ.18
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕಸ್ತೂರಿ ರಂಗನ್ ವರದಿ ಕುರಿತ ಸಾಧಕ- ಬಾಧಕಗಳ ಕುರಿತು ಶುಕ್ರವಾರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಸಮಾಲೋಚನೆ, ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.


ವರದಿ ಅನುಷ್ಠಾನ ಕುರಿತಂತೆ ಈ ಭಾಗದ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಭೌತಿಕ ಸಮೀಕ್ಷೆ ನಡೆಸುವ ಸಲಹೆ ನೀಡಿದ್ದು, ಆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.


ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯ ಹಾಗೂ ವರದಿ ಅನುಷ್ಠಾನದಿಂದಾಗುವ ಸಮಸ್ಯೆಗಳ ಬಗ್ಗೆ ಸ್ಥಳೀಯರು ತನ್ನ ಗಮನಕ್ಕೆ ತಂದಿದ್ದು, ಸೆಪ್ಟೆಂಬರ್ 27ರೊಳಗೆ ರಾಜ್ಯ ಸರ್ಕಾರದ ತೀರ್ಮಾನವನ್ನು ಕೇಂದ್ರಕ್ಕೆ ಕಳುಹಿಸಬೇಕಾಗಿದೆ. ಈ ನಿಟ್ಟಿಲ್ಲಿ ಸಂತ್ರಸ್ತರ ಅಭಿಪ್ರಾಯ ಆಲಿಸಲು ಖುದ್ದಾಗಿ ಇಲ್ಲಿಗೆ ಆಗಮಿಸಿದ್ದು, ಜನತೆಯ ಅಭಿಪ್ರಾಯ ಸರ್ಕಾರದ ಅಭಿಪ್ರಾಯವಾಗಬೇಕು. ಕೇರಳ ಮಾದರಿಯನ್ನು ಪ್ರಸ್ತಾಪಿಸಿದ್ದು, ಆ ಬಗ್ಗೆ ಸದನದಲ್ಲಿ ಚರ್ಚೆ ಮಾಡುವುದಾಗಿ ಭರವಸೆ ನೀಡಿದರು.


ಸೆ.21ರಿಂದ 3 ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದ್ದು ರೈತರು, ಬರಗಾಲ ಹಾಗೂ ಕಸ್ತೂರಿ ರಂಗನ್ ವಿಚಾರವಾಗಿ ಚರ್ಚೆ ಮಾಡಲಾಗುವುದು. ಸೋಮವಾರ ಮೊದಲ ದಿನವೇ ಕಸ್ತೂರಿ ರಂಗನ್ ವರದಿ ವಿಚಾರ ಚರ್ಚೆಗೆ ಬರಲಿದೆ. ಈ ಬಗ್ಗೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಭಾಗಕ್ಕೂ ಭೇಟಿ ನೀಡಿ ಅಲ್ಲಿನ ಜನರ ಭಾವನೆಯನ್ನು ಆಲಿಸುವುದಾಗಿ ಸಿಎಂ ಭರವಸೆ ನೀಡಿದರು.


ಅರಣ್ಯ ಹಕ್ಕು ಕಾಯ್ದೆಯಲ್ಲಿ ಕೆಲವರಿಗೆ 25 ವರ್ಷ ಹಾಗೂ ಉಳಿದವರಿಗೆ 75 ವರ್ಷ ಆಗಿರಬೇಕು ಎಂಬ ನಿಯಮವಿದೆ. ಎಲ್ಲರಿಗೂ 25 ವರ್ಷಗಳ ಮಿತಿಯನ್ನು ನಿಗದಿ ಮಾಡಲು ಮುಂದಿನ ದಿನಗಳಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳಿಸಲಾಗುವುದು. ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ತೊಂದರೆ ನೀಡದಿರುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದು ಬಗರ್ ಹುಕುಂ ಸಾಗುವಳಿ, ಉಳುವವನಿಗೆ ಭೂಮಿ ನೀಡಿದ್ದೇ ನಮ್ಮ ಸರ್ಕಾರ ಎಂದರು.


ನಾವು ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ, ಜನತೆಯ ಬದುಕಿನ ಮೇಲೆ ನಮಗೆ ಕಾಳಜಿ ಇದೆ. ಮೀನುಗಾರಿಕೆ ಸಂಬಂಧ ಸಚಿವ ಸಂಪುಟದಲ್ಲಿ ಪ್ರಮುಖ ತೀರ್ಮಾನ ಮಾಡಲಾಗಿದೆ. ಈ ಭಾಗದ ಜನಪ್ರತಿನಿಧಿಗಳು ವಲಯ ನಿರ್ವಹಣೆ ಯೋಜನೆ, ಹೆಬ್ರಿಯಲ್ಲಿ ತಾಲೂಕು ಆಸ್ಪತ್ರೆಗೆ ಬೇಡಿಕೆ ಇಟ್ಟಿದ್ದು, ಆ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು. ಮುಂದಿನ ದಿನಗಳಲ್ಲಿ ಉಡುಪಿಗೆ ಆಗಮಿಸಿ ಜನಪ್ರತಿನಿಧಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.


ತುಳುನಾಡಿನ ಜನ ದೇಶದ ಆಸ್ತಿ
ತುಳುನಾಡಿನ ಜನ ದೇಶದ ಆಸ್ತಿ. ಮುಂದಿನ ದಿನಗಳಲ್ಲಿ ಮತ್ತೆ ಬಂದು ನಿಮ್ಮ ಸಲಹೆ ಕೇಳುತ್ತೇನೆ. ಅಧಿವೇಶನದಲ್ಲಿ ನಿಮ್ಮ ಪ್ರತಿನಿಧಿಗಳ ಸಲಹೆ ಆಲಿಸುತ್ತೇನೆ. ಈ ಸರ್ಕಾರ ನಿಮ್ಮ ಜೊತೆ ಇದೆ ಎಂದು ಮುಖ್ಯಮಂತ್ರಿ ಡಿಕೆಶಿ ತಿಳಿಸಿದರು.


ಈ ಭಾಗದ ಎಲ್ಲಾ ಪಕ್ಷಗಳ ಶಾಸಕರು ಜನಪ್ರತಿನಿಧಿಗಳ ಜೊತೆ ಚರ್ಚಿಸಿ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ಮಾಡಿದ್ದೇವೆ. ಈ ಸಂಪುಟ ಸಭೆಯಲ್ಲಿ 60 ತೀರ್ಮಾನ ಮಾಡಿದ್ದು, ಅದರಲ್ಲಿ 40 ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿದೆ ಎಂದರು.


ನಿಮ್ಮ ಮಾತೃಭಾಷೆ ತುಳುವನ್ನು ಎರಡು ಜಿಲ್ಲೆಗಳಲ್ಲಿ ಎರಡನೇ ಅಧಿಕೃತ ಭಾಷೆ ಎಂದು ತೀರ್ಮಾನ ಮಾಡಿದ್ದೇವೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ, ಅಭಿವೃದ್ಧಿ ನೀತಿ ರೂಪಿಸಿ ಅನೇಕ ಯೋಜನೆಗೆ ಅನುಮೋದನೆ ನೀಡಿದ್ದೇವೆ. ಅದರಿಂದ ಹೂಡಿಕೆ ಆಕರ್ಷಿಸಿ, ಇಲ್ಲಿನ ಜನ ವಲಸೆ ಹೋಗುವುದನ್ನು ತಪ್ಪಿಸಬೇಕು ಎಂಬುದು ನಮ್ಮ ಆಶಯ ಎಂದರು.


ಈ ಸಂದರ್ಭದಲ್ಲಿ ಜನರೊಂದಿಗೆ ಮುಖ್ಯಮಂತ್ರಿ ಸಂವಾದ ನಡೆಸಿದರು. ಸಂವಾದಸಲ್ಲಿ ವಿವಿಧ ಸಂಘನೆಗಳ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು ಮಾತನಾಡಿದರು. ಹಿರಿಯ ವಕೀಲ ಟಿ.ಬಿ. ಶೆಟ್ಟಿ, ಮಲೆಕುಡಿಯ ಸಮುದಾಯದ ರಾಜ್ಯಾಧ್ಯಕ್ಷ ಶ್ರೀಧರ್ ಗೌಡ, ಉಡುಪಿ ರೈತ ಸಂಘದ ಉದಯ ಕುಮಾರ್, ವಂಡ್ಸೆ ಗ್ರಾ. ಪಂ. ಮಾಜಿ ಅಧ್ಯಕ್ಷ ನವೀನ್ ಅಡ್ಯಂತಾಯ, ನಾಡ್ಪಾಲು ಗ್ರಾ.ಪಂ. ಮಾಜಿ ಅಧ್ಯಕ್ಷ ದಿನೇಶ್ ಹೆಗ್ಡೆ, ಉದ್ಯಮಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿದರು.


ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಗುರುರಾಜ್ ಗಂಟಿಹೊಳಿ, ಕಿರಣ್ ಕುಮಾರ್ ಕೊಡ್ಗಿ, ಯಶಪಾಲ್ ಸುವರ್ಣ, ಎಂಎಲ್.ಸಿ ಮಂಜುನಾಥ ಭಂಡಾರಿ, ನಾರಾಯಣಗುರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಂಜುನಾಥ ಪೂಜಾರಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಎಸ್ಪಿ. ಹರಿರಾಮ್ ಶಂಕರ್, ಜಿ.ಪಂ. ಸಿಇಓ ಪ್ರತೀಕ್ ಬಾಯಲ್ ಮೊದಲಾದವರಿದ್ದರು.