ಲೋಕಬಂಧು ನ್ಯೂಸ್ ಉಡುಪಿ, ಸೆ.7
ತಪ್ಪು ಯಾರೇ ಮಾಡಿದರೂ ಅದನ್ನು ವಿರೋಧಿಸುವ ಛಾತಿ ಕೃಷ್ಣನದ್ದಾಗಿದ್ದು, ದುಷ್ಟ ಜನರನ್ನು ಶಿಕ್ಷಿಸಲು ಬಲ ಪ್ರಯೋಗವೂ ಬೇಕು ಎಂಬ ಸಂದೇಶವನ್ನು ಭಗವದ್ಗೀತೆಯಲ್ಲಿ ನೀಡಿದ್ದಾನೆ. ಶ್ರೀಕೃಷ್ಣ ಎಂದಿಗೂ ಸತ್ಯ ಮತ್ತು ನ್ಯಾಯದ ಪರವಾಗಿ ಕಾರ್ಯನಿರ್ವಹಿಸಿದ್ದಾನೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಹೇಳಿದರು.ಪರ್ಯಾಯ ಶೀರೂರು ಮಠ ಆಶ್ರಯದಲ್ಲಿ ಶ್ರೀಕೃಷ್ಣ ಮಠದಲ್ಲಿ ನಡೆದ ಕೃಷ್ಣಾಷ್ಟಮಿ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ದ್ರೌಪದಿಯ ರಕ್ಷಣೆ, ಸುದಾಮನ ಗೆಳೆತನ, ವಿದುರನ ಸ್ನೇಹ, ಗೋವರ್ಧನಗಿರಿ ಧಾರಣೆ ಇತ್ಯಾದಿ ಪ್ರಸಂಗಗಳು ಶ್ರೀಕೃಷ್ಣನ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಅತ್ಯುನ್ನತ ನಿದರ್ಶನಗಳಾಗಿದ್ದು, ಸಾವಿರ ವರ್ಷ ಸಂದರೂ ಈ ತತ್ವಗಳು ಪ್ರಸ್ತುತವಾಗಿರುತ್ತವೆ.
ಮನುಷ್ಯನ ಅಹಂಕಾರ ಹೋಗುವ ತನಕ ದೇವರ ಸಾಕ್ಷಾತ್ಕಾರ ಅಸಾಧ್ಯ. ಭಕ್ತಿಯೊಂದೇ ದೇವರನ್ನು ಒಲಿಸಿಕೊಳ್ಳುವ ಏಕೈಕ ಮಾರ್ಗ. ಭಕ್ತಿ ಇಲ್ಲದಿದ್ದರೆ ಎಲ್ಲಾ ಪೂಜೆಯೂ ವ್ಯರ್ಥ. ಕೃಷ್ಣನ ಭಕ್ತಿಯಲ್ಲಿ ಸಮಾನತೆ ಕಾಣಬಹುದು ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪರ್ಯಾಯ ಪೀಠಾಧೀಶ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು.
ಪರ್ಯಾಯ ಶೀರೂರು ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ ಉಪಸ್ಥಿತರಿದ್ದರು. ವಿಷ್ಣು ಪಾಡಿಗಾರ್ ಕಾರ್ಯಕ್ರಮ ನಿರೂಪಿಸಿದರು.
ಹುಲಿವೇಷ ಸ್ಪರ್ಧೆ ವಿಜೇತರು
ಈ ಬಾರಿ ರಾಜಾಂಗಣದಲ್ಲಿ 2 ದಿನ ನಡೆದ ಹುಲಿವೇಷ ಸ್ಪರ್ಧೆಯಲ್ಲಿ ಬೈಲೂರು ಇಷ್ಟಮಹಾಲಿಂಗೇಶ್ವರ ತಂಡ 1 ಲಕ್ಷ ರೂ. ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನ ಪಡೆದಿದೆ. ದ್ವೀತಿಯ ಸ್ಥಾನ ಪಡೆದ ಅಲೆವೂರು ವೀರಕೇಸರಿ ತಂಡಕ್ಕೆ 75 ಸಾವಿರ ರೂ., ತೃತೀಯ ಸ್ಥಾನ ಪಡೆದ ಅಲೆವೂರು ವಿಷ್ಣು ಸೇವಾ ಬಳಗಕ್ಕೆ 50 ಸಾವಿರ ರೂ. ಬಹುಮಾನ ಮೊತ್ತ ನೀಡಿ ಪರ್ಯಾಯ ಶ್ರೀಗಳು ಸನ್ಮಾನಿಸಿದರು.