ಲೋಕಬಂಧು ನ್ಯೂಸ್ | ಉಡುಪಿ, ಸೆ.19
ಉಡುಪಿ ಜಿಲ್ಲೆಯಲ್ಲಿರುವ ಮಲೆಯಾಳಿಗಳ ಹೆಮ್ಮೆಯ ಸಂಸ್ಥೆಯಾದ ಕೇರಳ ಕಲ್ಚರಲ್ ಆ್ಯಂಡ್ ಸೋಶಿಯಲ್ ಸೆಂಟರ್ (ಕೆಸಿಎಸ್‌ಸಿ) ಆಶ್ರಯದಲ್ಲಿ ಸೆಪ್ಟೆಂಬರ್ 20ರಂದು ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಸಂಸ್ಥೆಯ 32ನೇ ವಾರ್ಷಿಕೋತ್ಸವ ಹಾಗೂ ಓಣಂ ಆಚರಣೆ ನಡೆಯಲಿದೆ ಎಂದು ಕೆಸಿಎಸ್.ಸಿ ಕಾರ್ಯಕಾರಿ ಸಮಿತಿ ಸದಸ್ಯೆ ಡಾ.ಪಾರ್ವತಿ ಐತಾಳ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮವನ್ನು ಆರೋಗ್ಯ ಸಚಿವ ಯು. ಟಿ.ಖಾದರ್ ಪರೀದ್ ಉದ್ಘಾಟಿಸಲಿದ್ದು ಉಡುಪಿ ಶಾಸಕ ಯಶಪಾಲ್ ಸುವರ್ಣ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಮಾಹೆ ಹೆಲ್ತ್ ಸೈನ್ಸ್ ಪ್ರೊ ವೈಸ್ ಚಾನ್ಸೆಲರ್ ಡಾ. ಮ್ಯಾಥ್ಯೂಸ್ ಜಾಕೋಬ್, ನೋರ್ಕ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಕೆ., ಕೇರಳ ಸಮಾಜಂ ಮಂಗಳೂರು ಅಧ್ಯಕ್ಷ ಟಿ.ಕೆ.ರಾಜನ್, ಓಣಂ ಸಮಿತಿ ಅಧ್ಯಕ್ಷ ಶಿನೋದ್ ಟಿ.ಆರ್., ಕೆಸಿಎಸ್‌ಸಿ ಕಾರ್ಯದರ್ಶಿ ಬಿನೇಶ್ ವಿ.ಸಿ., ಕೋಶಾಧಿಕಾರಿ ಶಾಜಿ ವಿ. ಕರುಣ್, ಕೆ.ಸಿ.ಎಸ್‌ಸಿ ನಿಕಟಪೂರ್ವ ಅಧ್ಯಕ್ಷ ಸುಗುಣ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಕೆಸಿಎಸ್‌ಸಿ ಅಧ್ಯಕ್ಷ ರಾಜನ್ ಪಿಲಿಪ್ಸ್ ಅಧ್ಯಕ್ಷತೆ ವಹಿಸಲಿದ್ದು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಡಾ ವಿನೋದ್ ವಿ. ಥೋಮಸ್, ಆರೋಗ್ಯ ಕ್ಷೇತ್ರದ ಡಾ.ರಾಜೇಶ್ ನಾಯರ್, ಕೃಷಿಕ ಎಂ.ಎಲ್. ಜೋಸೆಫ್, ಕಲೆ- ಸಂಸ್ಕೃತಿ ಕ್ಷೇತ್ರದ ಲಿಯಾಕತ್ ಅಲಿ ಮತ್ತು ಯುವ ನೃತ್ಯಗಾತಿ ಸಾನ್ವಿ ರಾಜೇಶ್ ಅವರಿಗೆ 2026ನೇ ಸಾಲಿನ ಕೆ.ಸಿ.ಎಸ್.ಸಿ ಪಂಚರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಕೆಸಿಎಸ್‌ಸಿ ಸದಸ್ಯರ ಕುಟುಂಬದ ಪಿಯುಸಿ ಹಾಗೂ ಎಸ್ಎಸ್ಎಲ್.ಸಿ.ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ವಿವರಿಸಿದರು.
ಸಂಸ್ಥೆ ಅಶಕ್ತರಿಗೆ ಧನ ಸಹಾಯ, ಕೇರಳದಿಂದ ಇಲ್ಲಿಗೆ ಬಂದು ದಾರಿ ತಪ್ಪಿದವರನ್ನು ಊರಿನವರೊಂದಿಗೆ ಸೇರಿಸುವ ಸಹಾಯ ಮತ್ತು ಅಗತ್ಯ ಬಂದಾಗ ಹಲವಾರು ರೀತಿಯ ಸಹಾಯ ಮಾಡುತ್ತಿದೆ. ಮಲೆಯಾಳಂ ಮಿಶನ್ ಮೂಲಕ ಮಲೆಯಾಳ ಭಾಷೆಯನ್ನು ಕಲಿಸುವ ವ್ಯವಸ್ಥೆ, ಕೇರಳ ಸರಕಾರ ಪರವೂರಿನಲ್ಲಿ ನೆಲೆಸಿದವರಿಗೆ ನೀಡುವ ನೋರ್ಕಾ ಮೂಲಕ ನೀಡುವ ಹೆಲ್ತ್ ಇನ್ಶೂರೆನ್ಸ್'ನ್ನು ಈ ಬಾರಿ ಸಂಘದ ಸದಸ್ಯರ ಕುಟುಂಬಗಳು ಪಡೆಯುವ ವ್ಯವಸ್ಥೆಯನ್ನು ಸಂಘದ ಮುಖಾಂತರ ಮಾಡುವ ವ್ಯವಸ್ಥೆ ಮಾಡಲಾಗುವುದು. 70 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು ಉಲ್ಲಾಸದಿಂದ ಬದುಕುವಂತಾಗಲು 'ಸೂಪರ್ ಸೆವೆಂಟಿ' ಮತ್ತು ಯುವ ಸಮುದಾಯ ಸಮಾಜ ಸೇವಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಪೂರಕವಾಗಿ 'ಯೂಥ್ ವಿಂಗ್' ಆರಂಭಿಸುವುದಾಗಿ ಡಾ.ಐತಾಳ್ ತಿಳಿಸಿದರು.
ಸಮಾರಂಭದಲ್ಲಿ ವಿಶೇಷ ಆಕರ್ಷಣೆಯಾಗಿ ಸೆಲೆಬ್ರಿಟಿ ಮಲಯಾಳಂ ನಟ ರಾಜೇಶ್ ಹೆಬ್ಬಾರ್ ಭಾಗವಹಿಸಲಿದ್ದು, ಕಲಾ ಭವನ್ ರಾಜೇಶ್ ನೇತೃತ್ವದಲ್ಲಿ ಕಿರುತೆರೆಯ ಪ್ರಸಿದ್ಧ ಗಾಯಕರಿಂದ ಆರ್ಕೆಸ್ಟ್ರಾ ನಡೆಯಲಿದೆ. ಕೆಸಿಎಸ್‌ಸಿ ಕುಟುಂಬ ಸದಸ್ಯರಿಂದ ಸ್ವಾಗತ ನೃತ್ಯ, ಪುಷ್ಪಾಂಜಲಿ, ತಿರುವಾದಿರ ಕಳಿ, ಭರತನಾಟ್ಯ, ಮೋಹಿನಿಯಾಟ್ಟಂ, ಫ್ಯೂಷನ್ ಡಾನ್ಸ್, ಕೊಯಿತುಪಾಟ್ಟು ಡಾನ್ಸ್, ಕೈಕೊಟ್ಟಿಕಲಿ, ಮಹಾಭಾರತ ಥೀಮ್, ಸಿನೆಮಾಟಿಕ್ ಡಾನ್ಸ್ ನಡೆಯಲಿದೆ. ಕಾಲೇಜು ವಿದ್ಯಾರ್ಥಿನಿಯರಿಗಾಗಿ 'ಅತ್ತಾಪೂಕಳಂ' ಹೂವಿನ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ.
ಬೆಳಿಗ್ಗೆ 10ರಿಂದ 12.30ರ ವರೆಗೆ ಮಿತ್ರ ಹಾಸ್ಪಿಟಲ್ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ, ಮಧ್ಯಾಹ್ನ ಓಣo ಸದ್ಯ ಏರ್ಪಾಡಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಸಿಎಸ್‌ಸಿ ಅಧ್ಯಕ್ಷ ರಾಜನ್ ಫಿಲಿಪ್ಸ್, ಕೆಸಿಎಸ್‌ಸಿ ಓಣಂ ಸಮಿತಿ ಅಧ್ಯಕ್ಷ ಶಿನೋದ್ ಟಿ.ಆರ್., ಕೆಸಿಎಸ್‌ಸಿ ಕಾರ್ಯದರ್ಶಿ ಬಿನೇಶ್ ವಿ.ಸಿ., ಕಾರ್ಯಕಾರಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಶರೀಫ್ ಉಪಸ್ಥಿತರಿದ್ದರು.
