ತುಳುನಾಡಿನ ಜನತೆ ಬಯಸಿದ್ದು ಲಭಿಸಿದೆ

ಲೋಕಬಂಧು ನ್ಯೂಸ್ ಹೆಬ್ರಿ, ಸೆ.18

ತುಳುನಾಡಿನ ಜನತೆ ಬಯಸಿದ್ದು ಇವತ್ತು ಸಿಕ್ಕಿದೆ. ತುಳುವರ ಪ್ರಾರ್ಥನೆ, ಪ್ರಯತ್ನಕ್ಕೆ ಫಲ ಲಭಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಮುಗಿಸಿ ಹೆಬ್ರಿಯಲ್ಲಿ ಆಯೋಜಿಸಿದ ಕಸ್ತೂರಿ ರಂಗನ್ ವರದಿ ಕುರಿತ ಸಭೆಯಲ್ಲಿ ಭಾಗವಹಿಸಲು ಇಲ್ಲಿನ ಪದವಿ ಪೂರ್ವ ಕಾಲೇಜಿನ ಹೆಲಿಪ್ಯಾಡ್'ಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.


ಕಸ್ತೂರಿ ರಂಗನ್ ವರದಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವರದಿ ಬಾಧಿತ ಗ್ರಾಮಗಳ ಗ್ರಾಮಸ್ಥರಿಗೆ ಇದು ಆತಂಕದ ವಿಚಾರವಾಗಿದೆ. ನಾನು ಯಾರಿಗೂ ಉತ್ತರ ಕೊಡಲು ಬಂದಿಲ್ಲ. ಜನರ ಬೇಡಿಕೆ ಏನು, ಅವರ ಭಾವನೆ ಏನು ಎಂದು ಅವರಿಂದಲೇ ತಿಳಿಯಲು ಬಂದಿದ್ದೇನೆ. ನಾನು ಜನರ ಸಮಸ್ಯೆಗೆ ಪರಿಹಾರ ಹುಡುಕಲು ಬಂದಿದ್ದೇನೆ. ಜನರೇ ನನಗೆ ಅವರ ಸಮಸ್ಯೆ, ವಿಚಾರ ತಿಳಿಸುತ್ತಾರೆ ಎಂದು ಸಿಎಂ ಹೇಳಿದರು.