ನ.27-29: ಬ್ರಹ್ಮಾವರದಲ್ಲಿ ಉಡುಪಿ ಆಹಾರ, ಉದ್ಯಮ ಮೇಳ

ಲೋಕಬಂಧು ನ್ಯೂಸ್ | ಉಡುಪಿ
ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರು ಹಾಗೂ ಮಾರಾಟಗಾರರ ಸಂಘ ತನ್ನ ದಶಮಾನೋತ್ಸವ ಅಂಗವಾಗಿ ಮೂರು ದಿನಗಳ ಉಡುಪಿ ಆಹಾರ ಮತ್ತು ಉದ್ಯಮ ಮೇಳವನ್ನು ನ.27ರಿಂದ 29ರ ವರೆಗೆ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಆಯೋಜಿಸಿದೆ ಎಂದು ಕಾರ್ಯಕ್ರಮ ಸಂಚಾಲಕ, ವಕೀಲ ಶ್ರೀಧರ ಪಿ.ಎಸ್. ತಿಳಿಸಿದ್ದಾರೆ.
ಬುಧವಾರ‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳದಲ್ಲಿ ಆಹಾರೋದ್ಯಮಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ಹಾಗೂ ಮಾರಾಟ ಮಳಿಗೆಗಳು, ಕರ್ನಾಟಕ ಕರಾವಳಿಯ ಸಾಂಪ್ರದಾಯಿಕ ಖಾದ್ಯ- ವೈವಿಧ್ಯತೆ ಆಹಾರ ಮಳಿಗೆಗಳು, ಗೃಹೋಪಯೋಗಿ ಮಳಿಗೆಗಳು ಇರಲಿವೆ ಎಂದರು.


ಆಹಾರೋದ್ಯಮ ಸೇರಿದಂತೆ ಹೊಸ ಉದ್ಯಮಗಳಿಗೆ ಉತ್ತೇಜನ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ, ಗ್ರಾಮೀಣ ಭಾಗದ ವಿದ್ಯಾವಂತ ಯುವಜನತೆಗೆ ಸ್ವಯಂ ಉದ್ಯೋಗಾವಕಾಶ ಒದಗಿಸುವುದು ಹಾಗೂ ಕರಾವಳಿಯ ಸಾಂಪ್ರದಾಯಿಕ ಆಹಾರ ವೈವಿಧ್ಯವನ್ನು ಪರಿಚಯಿಸುವ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ ಎಂದು ಶ್ರೀಧರ ಪಿ.ಎಸ್‌. ತಿಳಿಸಿದರು.


ನ.27ರಿಂದ 29ರ ವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 10ರ ವರೆಗೆ ಮೇಳ ನಡೆಯಲಿದೆ. ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾವಂತ ನಿರುದ್ಯೋಗಿ ಯುವಕ- ಯುವತಿಯರಿಗೆ ಆಹಾರೋದ್ಯಮದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ ನೀಡಲು ಆದ್ಯತೆ ನೀಡಲಾಗುತ್ತದೆ. ಅಲ್ಲದೆ, ಆಹಾರೋದ್ಯಮ ಕ್ಷೇತ್ರದಲ್ಲಿ ಸಾಧನೆಗೈದವರಿಗೆ 'ಆಹಾರೋದ್ಯಮ ರತ್ನ' ಹಾಗೂ ಉದ್ಯಮ ಕ್ಷೇತ್ರದ ಸಾಧಕರಿಗೆ 'ಉದ್ಯಮ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಘದ ಅಧ್ಯಕ್ಷ ವಿಶ್ವನಾಥ ಕುಲಾಲ್ ತಿಳಿಸಿದರು.


ನ.27ರಂದು ಸಂಜೆ 4.30 ಗಂಟೆಗೆ ಕುಂಜಾಲು ಸರ್ಕಲ್‌ನಿಂದ ಗಾಂಧಿ ಮೈದಾನದ ವರೆಗೆ ವೈಭವದ ವಾಹನ ಜಾಥಾ ನಡೆದು 6.30 ಗಂಟೆಗೆ ಮೇಳದ  ಉದ್ಘಾಟನೆ ನಡೆಯಲಿದೆ. ಅದಕ್ಕೂ ಮುನ್ನ ಸಂಜೆ 6ರಿಂದ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ನೃತ್ಯೋಪಾಸನೆ ಕಾರ್ಯಕ್ರಮ ನಡೆಯಲಿದೆ.


ಮೇಳವನ್ನು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆಹಾರೋದ್ಯಮ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಉದ್ಘಾಟಿಸಿದರೆ, ಉಡುಪಿ ಶಾಸಕ ಯಶಪಾಲ್‌ ಸುವರ್ಣ ಗೃಹೋಪಯೋಗಿ ವಸ್ತುಗಳ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಉದ್ಯಮಿ ಸಾಯಿರಾಧಾ ಮನೋಹರ ಶೆಟ್ಟಿ ಆಹಾರ ಮೇಳಕ್ಕೆ ಚಾಲನೆ ನೀಡಲಿದ್ದಾರೆ.


ರಾತ್ರಿ 7 ಗಂಟೆಗೆ ಸಂಘದ ದಶಮಾನೋತ್ಸವ ಸಂಭ್ರಮ ಅಂಗವಾಗಿ 'ದಶರುಚಿ-2026' ಸಭಾ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದು, ದಶಮಾನೋತ್ಸವ ಸಮಿತಿ ಅಧ್ಯಕ್ಷ ಹೆರಾಲ್ಡ್‌ ಅಧ್ಯಕ್ಷತೆ ವಹಿಸಲಿದ್ದಾರೆ.


ಈ ಸಂದರ್ಭದಲ್ಲಿ ಆಹಾರೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕೃಷ್ಣ ಪ್ರಸಾದ್‌ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಸಂಪತ್‌ ಕುಮಾ‌ರ್ ಶೆಟ್ಟಿ ಹಾಗೂ ಉಡುಪಿಯ ಆಲ್ವಿನ್ ಬೇಕರಿಯ ವಾಲ್ವರ್ ಜೋಸೆಫ್‌ ಸಾಲ್ದಾನಾ ಅವರಿಗೆ 'ಆಹಾರೋದ್ಯಮ ರತ್ನ' ಪ್ರಶಸ್ತಿ  ನೀಡಿ ಗೌರವಿಸಲಾಗುವುದು.


ನ.28ರಂದು ರಾತ್ರಿ 8 ಗಂಟೆಗೆ 'ದಶರುಚಿ' ಸಿಂಹಾವಲೋಕನ ಸಭೆ ನಡೆಯಲಿದೆ. ಸಂಘದ ಉಪಾಧ್ಯಕ್ಷ ಸುದೇವ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಲಿದ್ದಾರೆ. ಉದ್ಯಮಿ ಶ್ರೀನಿವಾಸ ರಾವ್ ಗೋಪಾಡಿ ಹಾಗೂ ಆಲ್ಬರ್ಟ್‌ ವಿಲ್ಫ್ರೆಡ್ ಡಿ'ಸೋಜಾ ಅವರಿಗೆ ಆಹಾರೋದ್ಯಮ ರತ್ನ ಪ್ರಶಸ್ತಿ ಹಾಗೂ ಮಂಗಳೂರು ರೋಹನ್ ಕಾರ್ಪೋರೇಷನ್‌ನ ರೋಹನ್ ಮೊಂತೆರೊ ಅವರಿಗೆ 'ಉದ್ಯಮ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಗುವುದು.


ನ.29ರಂದು ಸಂಜೆ 7 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಉಪಸ್ಥಿತಿಯಲ್ಲಿ ನಡೆಯಲಿದ್ದು, ಕಾರ್ಕಳ ಶಾಸಕ ಸುನಿಲ್ ಕುಮಾರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಆಶಯ ಭಾಷಣ ಮತ್ತು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಉದ್ಯಮಿ ಆನಂದ ಸಿ.ಕುಂದರ್‌ ಅವರಿಗೆ 'ಉದ್ಯಮ ರತ್ನ' ಪ್ರಶಸ್ತಿ ಹಾಗೂ ರಾಘವೇಂದ್ರ ರಾವ್ ನೇರಂಬಳ್ಳಿ ಮತ್ತು ಪ್ರಭಾಕರ ಪೂಜಾರಿ ಇವರಿಗೆ 'ಆಹಾರೋದ್ಯಮ ರತ್ನ' ಪ್ರಶಸ್ತಿ ನೀಡಲಾಗುವುದು.


ರಾತ್ರಿ 'ಉಡುಪಿ ಸರಿಗಮಪ'ದ ಪೈನಲ್ ನಡೆಯಲಿದ್ದು, ವಿಜೇತರಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನ ಪ್ರದಾನ ಮಾಡಲಾಗುವುದು. ಪ್ರತಿದಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮನರಂಜನಾ ಆಟಗಳನ್ನೂ ಆಯೋಜಿಸಲಾಗಿದೆ ಎಂದು ಶ್ರೀಧರ ಪಿ.ಎಸ್‌. ವಿವರಿಸಿದರು.


ದಶಮಾನೋತ್ಸವ ಸಮಿತಿ ಅಧ್ಯಕ್ಷ ಹೆರಾಲ್ಡ್ ಡಿ'ಸೋಜಾ, ಕೋಶಾಧಿಕಾರಿ ಶಶಿಕಾಂತ್ ಜಿ. ನಾಯಕ್, ಸಂಘಟನಾ ಕಾರ್ಯದರ್ಶಿ ದಿವಾಕರ ಸನಿಲ್‌, ಪ್ರಧಾನ ಕಾರ್ಯದರ್ಶಿ ಸತ್ಯಪ್ರಕಾಶ್ ಶೆಣೈ ಉಪಸ್ಥಿತರಿದ್ದರು.