ಅ.4: ದಿನಪೂರ್ತಿ ಚಿತ್ರಕೂಟ ಆಯುರ್ವೇದ ಹಬ್ಬ

ಲೋಕಬಂಧು ನ್ಯೂಸ್ | ಕುಂದಾಪುರ
ಆಲೂರು ಗ್ರಾಮದ ಕಳಿಯಲ್ಲಿರುವ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ ವತಿಯಿಂದ ಅಕ್ಟೋಬರ್ 4ರಂದು ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಚಿತ್ರಕೂಟ ಆಯುರ್ವೇದ ಹಬ್ಬ ಆಲೂರಿನ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಆವರಣದಲ್ಲಿ ನಡೆಯಲಿದೆ ಎಂದು ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಮುಖ್ಯಸ್ಥ ಡಾ.ರಾಜೇಶ್ ಬಾಯರಿ ತಿಳಿಸಿದ್ದಾರೆ.
ಬೆಳಗ್ಗೆ 9.30ಕ್ಕೆ ಉದ್ಘಾಟನ ಸಮಾರಂಭ ನಡೆಯಲಿದ್ದು, ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಚಿನ್ಮಯ ಆಸ್ಪತ್ರೆಯ ಡಾ.ಉಮೇಶ್ ಪುತ್ರನ್, ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್. ಶೆಟ್ಟಿ ಮೊದಲಾದವರು ಭಾಗವಹಿಸುವರು.


ಅಪರಾಹ್ನ 4ಕ್ಕೆ ಸಮಾರೋಪ ನಡೆಯಲಿದ್ದು ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಮತ್ತು ಬಿ.ಎಂ. ಸುಕುಮಾ‌ರ್ ಶೆಟ್ಟಿ, ಎಂ. ಎಸ್. ಮಂಜ ಚಾರಿಟೆಬಲ್ ಟ್ರಸ್ಟ್ ಮಾರಣಕಟ್ಟೆ ಅಧ್ಯಕ್ಷ ಕೃಷ್ಣಮೂರ್ತಿ ಮಂಜ, ಪತ್ರಕರ್ತ ಯು. ಎಸ್. ಶೆಣೈ, ಎಎಫ್‌ಐ ಉಡುಪಿ ಅಧ್ಯಕ್ಷ ಡಾ. ಎನ್.ಟಿ. ಅಂಚನ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.


ಬೆಳಗ್ಗೆ 9ರಿಂದ ಶಾಲಾ ಮಕ್ಕಳಿಗೆ ಉಡುಪಿ ಜಿಲ್ಲಾ ಮಟ್ಟದ ಭಾಷಣ, ಪ್ರಬಂಧ, ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರು ಪ್ರಥಮ 3 ಸಾವಿರ ರೂ., ದ್ವಿತೀಯ 2 ಸಾವಿರ ರೂ., ತೃತೀಯ 1 ಸಾವಿರ ರೂ. ಬಹುಮಾನ ಪಡೆಯಲಿದ್ದಾರೆ. ಒಂದು ವಿಭಾಗದಲ್ಲಿ ಒಂದು ಶಾಲೆಯ ಒಬ್ಬ ವಿದ್ಯಾರ್ಥಿ ಮಾತ್ರ
ಭಾಗವಹಿಸಬಹುದು ಎಂದು ಡಾ.ಬಾಯರಿ ವಿವರಿಸಿದರು.


ಹಬ್ಬದ ಪ್ರಮುಖ ಆರು ಆಕರ್ಷಣೆ
ನಿಮ್ಮ ಪ್ರಕೃತಿ, ನಿಮ್ಮ ಆಹಾರ: ಆಯುರ್ವೇದ ತಜ್ಞ ವೈದ್ಯರಿಂದ ಉಚಿತ ನಾಡಿ ಪರೀಕ್ಷೆ ಹಾಗೂ ತ್ರಿದೋಷಗಳಾದ ವಾತ, ಪಿತ್ತ, ಕಫ ಪ್ರಕೃತಿ ವಿಶ್ಲೇಷಣೆ ನಡೆಸಿ ವೈಯಕ್ತಿಕ ಆಹಾರ ಮತ್ತು ಜೀವನಶೈಲಿ ಮಾರ್ಗದರ್ಶನ.

ಗೋಮಾತೆ ಅಪ್ಪುಗೆ: ದೇಸಿ ಗೋಶಾಲಾ ಭೇಟಿ, ಗೋಸಂಸ್ಕೃತಿಯ ಮಹತ್ವ ಹಾಗೂ ಹಸುವನ್ನು ಪ್ರೀತಿಯಿಂದ ಅಪ್ಪಿಕೊಳ್ಳುವ ನವೀನ ಅನುಭವ.

ಕಷಾಯ ಶಾಲೆ: ಮನೆಯ ಅಡುಗೆಯ ಸಾಮಾಗ್ರಿಗಳು ಹಾಗೂ ಹಿತ್ತಿಲಿನ ಔಷಧೀಯ ಗಿಡಮೂಲಿಕೆಗಳಿಂದ ರೋಗನಿರೋಧಕ ಕಷಾಯಗಳನ್ನು ತಯಾರಿಸುವ ನೇರ ಪ್ರಾತ್ಯಕ್ಷಿಕೆ. ರೋಗ ನಿರೋಧಕ ಮನೆ ಮದ್ದುಗಳ ತಯಾರಿ ಪ್ರಾತ್ಯಕ್ಷಿಕೆ, ಆಹಾರ ಮೇಳ, ಸಂತೆ ನಡೆಯಲಿದೆ.

ದೇವ ವನ, ಔಷಧಿ ವನ: 18 ಎಕರೆ ಹಸಿರು ಪರಿಸರದಲ್ಲಿ ರಕ್ತಚಂದನ, ಏಕನಾಯಕ, ರುದ್ರಾಕ್ಷಿ ಸೇರಿದಂತೆ 150ಕ್ಕೂ ಹೆಚ್ಚು ಅಪೂರ್ವ ಗಿಡಮೂಲಿಕೆಗಳ ಪರಿಚಯ ನಡಿಗೆ. ಆಸಕ್ತ ಮಕ್ಕಳಿಗೆ ಔಷಧೀಯ ಸಸಿಗಳ ವಿತರಣೆ.

ಆಯುರ್ವೇದ ಜಗತ್ತು: ಪಂಚಕರ್ಮ ಚಿಕಿತ್ಸಾ ವಿಧಾನಗಳ ಪರಿಚಯ ಮತ್ತು ವಿವರಣೆ.

ಮಕ್ಕಳಿಗಾಗಿ ಕಿಡ್ಸ್‌ ಝೋನ್: ಮಕ್ಕಳಿಗಾಗಿ ವಿಶೇಷ ಆಟದ ವಲಯ ಮತ್ತು ವಿನೋದ ಕೂಟ.


ಪ್ರಕೃತಿ ಮತ್ತು ದೇಸಿ ಮಳಿಗೆಗಳ ವೈಭವ
ಆಯುರ್ವೇದ ಹಬ್ಬದಲ್ಲಿ ಪ್ರಕೃತಿ, ಆರೋಗ್ಯ ಮತ್ತು ಗ್ರಾಮೀಣ ಪರಂಪರೆಗೆ ಪೂರಕವಾದ ವಿವಿಧ ಸಾವಯವ ಮಳಿಗೆಗಳನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ಸದ್ಗುರು ಆಯುರ್ವೇದ, ಆತ್ಮಿಕ್ ಆಯುರ್ವೇದ ಹಾಗೂ ಆಯುರ್ವೇದಿಕ್ ಹುಬ್ಬಳ್ಳಿಯ ಸಾಂಪ್ರದಾಯಿಕ ಗಿಡಮೂಲಿಕೆ ಔಷಧಿಗಳು, ನೈಸರ್ಗಿಕ ಮಸಾಜ್ ಸಾಧನಗಳು, ದೇಸಿ ಗೋ ಉತ್ಪನ್ನಗಳು, ತುಮಕೂರಿನ ಸಾವಯವ ಧಾನ್ಯಗಳು, ತಾರಸಿ ತೋಟಕ್ಕೆ ಸೂಕ್ತವಾದ ದೇಸಿ ತರಕಾರಿ ಬೀಜಗಳು, ಕುಂದಾಪುರದ ಸ್ವದೇಶಿ ಮಳಿಗೆ ಹಾಗೂ ಉಡುಪಿಯ ಆ‌ರ್.ಕೆ. ಉಪ್ಪಿನಕಾಯಿಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ.‌ ಜೊತೆಗೆ ಆರೋಗ್ಯಕರ ಪಾನೀಯಗಳಾದ ತಾಜಾ ನೀರಾ, ನೆರಳಕಟ್ಟೆಯ ಕಬ್ಬಿನ ಹಾಲು, ಆಲೂರಿನ ಗೋಲಿ ಸೋಡಾ, ನೈಸರ್ಗಿಕ ಐಸ್‌ಕ್ರೀಮ್ ಹಾಗೂ ಪರಿಸರಸ್ನೇಹಿ ಜೀವನಶೈಲಿಗೆ ಒತ್ತು ನೀಡುವ ಆಲೂರಿನ ಮಣ್ಣಿನ ಮಡಕೆಗಳು, ಮರದ ಗೃಹಬಳಕೆ ಪರಿಕರಗಳು ಮತ್ತು ಹಟ್ಟಿಯಂಗಡಿಯ ನಮ್ಮಭೂಮಿ ಸಂಸ್ಥೆಯ ಗ್ರಾಮೀಣ ಕರಕುಶಲ ವಸ್ತುಗಳ ಮಳಿಗೆಗಳು ಸಾರ್ವಜನಿಕರಿಗೆ ನೈಸರ್ಗಿಕ ಜೀವನಶೈಲಿಯನ್ನು ಹತ್ತಿರದಿಂದ ಪರಿಚಯಿಸಲಿವೆ.


ಕರಾವಳಿಯ ಅಪೂರ್ವ ಆಯುರ್ವೇದ ಥಾಲಿ
ಮಧ್ಯಾಹ್ನದ ಊಟಕ್ಕೆ ಆರೋಗ್ಯ ಮತ್ತು ರುಚಿಯ ಸಂಗಮವಾದ ಅಪೂರ್ವ ಆಯುರ್ವೇದ ಥಾಲಿಯನ್ನು ಅತ್ಯಂತ ರಿಯಾಯಿತಿ/ ಸಣ್ಣ ಮೊತ್ತಕ್ಕೆ ನೀಡಲಾಗುತ್ತದೆ. ಈ ಥಾಲಿಯಲ್ಲಿ ಗೆಣಸಿನ ಸೂಪ್, ಹುರುಳಿ ಕೊಟ್ಟೆ ಕಡುಬು, ನೆಲಗಡಲೆ ಕೋಸಂಬರಿ, ಹೆಸರುಕಾಳು ತೊವ್ವೆ, ಕೆಂಪು ಅಕ್ಕಿ ಅನ್ನ, ಹುರುಳಿ ಸಾರು, ಪತ್ರೋಡೆ, ನುಗ್ಗೆ ಸೊಪ್ಪಿನ ಚಟ್ನಿ, ಚಕ್ಕೆ ಸೊಪ್ಪಿನ ಕೆಂಪು ಚಟ್ನಿ, ಒಂದೆಲಗ ತಂಬುಳಿ, ಬೋಂಡ ಪಾಯಸ, ಬಾಳೆದಿಂಡಿನ ಬೆಲ್ಲದ ಪಾಕ, ಕುಂಬಳಕಾಯಿ ಜ್ಯೂಸ್, ಮಜ್ಜಿಗೆಸೊಪ್ಪಿನ ಮಜ್ಜಿಗೆ ಹಾಗೂ ಸಾಂಪ್ರದಾಯಿಕ ಹಾಲುಬಾಯಿ ಇರಲಿವೆ.