ಲೋಕಬಂಧು ನ್ಯೂಸ್ ಬ್ರಹ್ಮಾವರ
ಬಾಳೆಕುದ್ರು ಮಠ ಇದೀಗ ಗಂಭೀರ ವಿವಾದಕ್ಕೆ ಸಿಲುಕಿದ್ದು, ಮಠಕ್ಕೆ ಸೇರಿದ ಸುಮಾರು 1,000 ವರ್ಷಗಳಷ್ಟು ಪುರಾತನವಾದ ಆರು ವಿಗ್ರಹಗಳನ್ನು ಮಾರಾಟ ಮಾಡಲು ಯತ್ನಿಸಿದ ಆರೋಪದಡಿ ಮಠಾಧೀಶ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಸೇರಿದಂತೆ ಐವರ ವಿರುದ್ಧ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಮಠದ ಹಿತರಕ್ಷಣಾ ಸಮಿತಿ ಸದಸ್ಯರು ತಿಳಿಸಿದ್ದಾರೆ.ಮಠಕ್ಕೆ ಬೀಗ ಹಾಕಲಾಗಿದ್ದು, ನಿತ್ಯ ಪೂಜೆ ಸ್ಥಗಿತಗೊಂಡಿದೆ. ಮಠದ ಹೊರಗಿನ ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ಅವಿತುಕೊಂಡಿದ್ದ ಮೂವರು ಅಪರಿಚಿತರನ್ನು ಕೋಟ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಳೆಕುದ್ರು ಶ್ರೀಮಠದ ಹಿತರಕ್ಷಣಾ ಸಮಿತಿ ಸದಸ್ಯ ಸುರೇಶ್ ಅಡಿಗ ಹಾಗೂ ಮಠದ ಶಿಷ್ಯ ಪ್ರೀತಮ್ ಅಡಿಗ ಗುರುವಾರ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಠದ ಆಡಳಿತ, ಪುರಾತನ ವಿಗ್ರಹಗಳ ಸುರಕ್ಷತೆ ಮತ್ತು ಧಾರ್ಮಿಕ ಸಂಪ್ರದಾಯಗಳ ಕುರಿತು ಹಲವು ಗಂಭೀರ ಆರೋಪಗಳನ್ನು ಮಾಡಿದರು.
ಜಗದೀಶ್ ಐತಾಳ್ ನೀಡಿದ ದೂರಿನ ಮೇರೆಗೆ ನ.2ರಂದು ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದ್ದು ಮಠದ ಸ್ವಾಮೀಜಿ ವಾಸುದೇವ ಸದಾಶಿವಾಶ್ರಮ, ಆಡಳಿತಾಧಿಕಾರಿ ಅನಿಲ್ ಕುಮಾರ್, ಸಿಬ್ಬಂದಿಗಳಾದ ಜಯಲಕ್ಷ್ಮಿ ಮತ್ತು ಶ್ರೇಯಸ್ ಹಾಗೂ ಬೆಂಗಳೂರಿನ ಆ್ಯಂಟಿಕ್ ವಸ್ತುಗಳ ವ್ಯಾಪಾರಿ ನಾಗೇಂದ್ರ ಪ್ರಸಾದ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಪುರಾತನ ವಿಗ್ರಹಗಳ ಮಾರಾಟಕ್ಕೆ ಯತ್ನ
ಮಠಕ್ಕೆ ಸೇರಿದ್ದೆಂದು ಹೇಳಲಾದ ಸುಮಾರು 1,000 ವರ್ಷಗಳಷ್ಟು ಹಳೆಯದಾದ ಆರು ವಿಗ್ರಹಗಳ ಚಿತ್ರಗಳು ಬೆಂಗಳೂರಿನ ಆ್ಯಂಟಿಕ್ ವ್ಯಾಪಾರ ಸಂಸ್ಥೆಯೊಂದರ ವೆಬ್ಸೈಟ್ನಲ್ಲಿ ಮಾರಾಟಕ್ಕೆ ಪ್ರಕಟವಾಗಿವೆ ಎಂದು ಪ್ರೀತಮ್ ಅಡಿಗ ಆರೋಪಿಸಿದರು.
ಇತಿಹಾಸಕಾರ ಪಾದೂರು ಗುರುರಾಜ ಭಟ್ ಅವರು ಹಿಂದಿನ ಮಠಾಧೀಶ ಶಂಕರಾಶ್ರಮ ಸ್ವಾಮೀಜಿ ಸಂದರ್ಶನದ ಮೂಲಕ ಪ್ರಕಟಿಸಿರುವ ಐತಿಹಾಸಿಕ ದಾಖಲೆಗಳಲ್ಲಿನ ವಿಗ್ರಹಗಳ ಚಿತ್ರಗಳು ಹಾಗೂ ವೆಬ್ಸೈಟ್ನಲ್ಲಿರುವ ಚಿತ್ರಗಳನ್ನು ಹೋಲಿಸಿದಾಗ ಅವು ಮಠಕ್ಕೆ ಸೇರಿದ ವಿಗ್ರಹಗಳಾಗಿವೆ ಎಂಬ ಅನುಮಾನ ದಟ್ಟವಾಗಿದೆ.
ವಿಗ್ರಹಗಳ ಪ್ರಸ್ತುತ ಸ್ಥಿತಿ, ಮಠದಲ್ಲಿರುವ ಮೂಲ ವಿಗ್ರಹಗಳ ಸಂಖ್ಯೆ ಹಾಗೂ ಅವುಗಳ ಮಾರಾಟದ ಹಿಂದಿನ ಉದ್ದೇಶದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅಂತರರಾಷ್ಟ್ರೀಯ ಪುರಾತನ ವಸ್ತುಗಳ ಕಳ್ಳಸಾಗಣೆ ಜಾಲದೊಂದಿಗೆ ಈ ಪ್ರಕರಣದ ಸಂಬಂಧವಿದೆಯೇ ಎಂಬುದನ್ನೂ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಈ ಸಂಬಂಧ ನಾಗೇಂದ್ರ ಪ್ರಸಾದ್ ಅವರನ್ನು ಬೆಂಗಳೂರಿನ ಪೊಲೀಸರು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ತಿಳಿಸಿದರು.
ಎರಡು ವರ್ಷಗಳಿಂದ ವಿವಾದ
ಕಳೆದ ಎರಡು ವರ್ಷಗಳಿಂದ ಸನ್ಯಾಸಿ ಎಂದು ಹೇಳಿಕೊಂಡು ವಾಸುದೇವ ಸದಾಶಿವಾಶ್ರಮ ಎಂಬ ವ್ಯಕ್ತಿ ಮಠದಲ್ಲಿ ನೆಲೆಸಿದ್ದು, ಅವರನ್ನು ಸ್ಥಳೀಯ ಭಕ್ತರು ಶ್ರೀಮಠದ ಸ್ವಾಮೀಜಿ ಎಂದು ಒಪ್ಪಿಕೊಂಡಿಲ್ಲ ಎಂದು ಪ್ರೀತಮ್ ಅಡಿಗ ಹೇಳಿದರು.
ಇತ್ತೀಚೆಗೆ ಸ್ವಾಮೀಜಿಗೆ ಸಂಬಂಧಿಸಿದ್ದೆನ್ನಲಾದ ಅಶ್ಲೀಲ ಆಡಿಯೋ ಸಂಭಾಷಣೆಗಳು ವೈರಲ್ ಆಗಿದ್ದು, ಅವು ಎಐ ಮೂಲಕ ಸೃಷ್ಟಿಸಿದ ನಕಲಿ ಆಡಿಯೋಗಳೆಂದು ಸ್ವಾಮೀಜಿಯ ಕಡೆಯವರು ಹೇಳಿಕೊಂಡಿದ್ದರು. ಆದರೆ, ಫೊರೆನ್ಸಿಕ್ ಸಾಫ್ಟ್ವೇರ್ ಮೂಲಕ ಪರಿಶೀಲಿಸಿದಾಗ ಅವು ಎಐ ಸೃಷ್ಟಿಯಲ್ಲ ಎಂಬುದು ತಿಳಿದುಬಂದಿದೆ ಎಂದು ಪ್ರೀತಂ ಅಡಿಗ ಪ್ರತಿಪಾದಿಸಿದರು
ಮಠಕ್ಕೆ ಬೀಗ, ನರಸಿಂಹ ದೇವರ ಪೂಜೆ ಸ್ಥಗಿತ
ಎಫ್ಐಆರ್ ದಾಖಲಾದ ಬಳಿಕ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ, ಆಡಳಿತಾಧಿಕಾರಿ ಹಾಗೂ ಸಿಬ್ಬಂದಿ ಮಠದಿಂದ ನಾಪತ್ತೆಯಾಗಿದ್ದು, ಮಠಕ್ಕೆ ಬೀಗ ಹಾಕಲಾಗಿದೆ. ಅದರಿಂದ ನರಸಿಂಹ ದೇವರಿಗೆ ಪ್ರತಿದಿನ ಮೂರು ಹೊತ್ತು ನಡೆಯುತ್ತಿದ್ದ ಪೂಜಾ ಕೈಂಕರ್ಯಗಳು ಸ್ಥಗಿತಗೊಂಡಿವೆ ಎಂದು ಸುರೇಶ್ ಅಡಿಗ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ಬೆಳಿಗ್ಗೆ ಬೇರೆ ಮಠದಿಂದ ಬಂದವರು ಎಂದು ಹೇಳಲಾಗುತ್ತಿರುವ ಕೆಲವರು ಪೂಜೆ ಸಲ್ಲಿಸಿದ್ದರೂ, ಮಠದ ಸಾಂಪ್ರದಾಯಿಕ ಪದ್ಧತಿಯಂತೆ ಪೂಜೆ ನಡೆದಿಲ್ಲ. ಸ್ಥಳೀಯ ಭಕ್ತರಿಗೆ ಮಠ ಪ್ರವೇಶಿಸಲು ಸಾಧ್ಯವಾಗದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.
ಇದೇ ವೇಳೆ ಮಠದ ಹೊರಗಿನ ಕೊಠಡಿಯಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಅವಿತುಕೊಂಡಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ವಿಚಾರಿಸಿದಾಗ ತಾವು ಕೊಪ್ಪದಿಂದ ಮಠ ಕಾಯಲು ಬಂದಿದ್ದು ಸ್ವಾಮೀಜಿಯವರೇ ಕಳುಹಿಸಿದ್ದಾರೆ ಎಂದವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಅನುಮಾನಗೊಂಡ ಸ್ಥಳೀಯರು ಕೋಟ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಅವರನ್ನು ಮಠಕ್ಕೆ ಕಳುಹಿಸಿದವರು ಯಾರು ಹಾಗೂ ಅವರ ಉದ್ದೇಶವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ.
ಮಠದ ಆಸ್ತಿಪಾಸ್ತಿ, ಪುರಾತನ ವಿಗ್ರಹಗಳು ಹಾಗೂ ಧಾರ್ಮಿಕ ಪರಂಪರೆಯ ರಕ್ಷಣೆಗೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು. ವಿಗ್ರಹಗಳ ಮಾರಾಟದ ಆರೋಪ ಸೇರಿದಂತೆ ಎಲ್ಲಾ ಬೆಳವಣಿಗೆಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸಬೇಕು. ಮಠದ ನಿತ್ಯ ಪೂಜೆ ಪುನರಾರಂಭಿಸಿ ಭಕ್ತರಿಗೆ ಪ್ರವೇಶ ಕಲ್ಪಿಸಬೇಕು ಎಂದು ಸುರೇಶ್ ಅಡಿಗ ಹಾಗೂ ಪ್ರೀತಮ್ ಅಡಿಗ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗೋಪಾಲಕೃಷ್ಣ ಉಡುಪ, ಸಚ್ಚಿದಾನಂದ ಅಡಿಗ, ಶಿವರಾಮ ಅಡಿಗ, ಶಿವರಾಮ ಉಡುಪ, ಪಟ್ಟಾಭಿರಾಮ ಸೋಮಯಾಜಿ, ಶ್ರೀಧರ ಭಟ್, ರಾಧಾಕೃಷ್ಣ ನಾಯಕ್, ನಾಗರಾಜ್ ಮಯ್ಯ, ಸುಬ್ರಹ್ಮಣ್ಯ ಆಚಾರ್ಯ, ರಾಜೇಶ್ ಮಧ್ಯಸ್ಥ ಹಾಗೂ ಅನಸೂಯ ದೇವಾಡಿಗ ಮೊದಲಾದವರಿದ್ದರು.