ಲೋಕಬಂಧು ನ್ಯೂಸ್ ಉಡುಪಿ
ಭಾವಿ ಪರ್ಯಾಯ ಸೋದೆ ಶ್ರೀವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ದ್ವಿತೀಯ ಶ್ರೀಕೃಷ್ಣ ಪೂಜಾ ಪರ್ಯಾಯದ ಪೂರ್ವಭಾವಿ ಪ್ರಥಮ ಮುಹೂರ್ತವಾದ ಬಾಳೆ ಮುಹೂರ್ತ ನ.29ರಂದು ನಡೆಯಲಿದ್ದು ಅದೇ ಸಂದರ್ಭದಲ್ಲಿ ನ.29ರಿಂದ ಡಿ.1ರ ವರೆಗೆ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಡೆಯುವ ರಾಷ್ಟ್ರ ಮಟ್ಟದ 'ಕದಳೀ ವಿಶ್ವದರ್ಶನ' ಬಾಳೆ ಮೇಳವನ್ನು ಸಮನ್ವಯತೆಯಿಂದ ಸುಗಮವಾಗಿ ನಡೆಸಲು ನಿರ್ಧರಿಸಿ, ಸರ್ವರ ಸಹಕಾರ ಬಯಸಲಾಯಿತು.ಕಾರ್ಯಕ್ರಮಗಳ ಯಶಸ್ವಿ ಹಾಗೂ ಸುಗಮ ನಿರ್ವಹಣೆ ಆಶಯದಿಂದ ಸೋದೆ ಮಠದಲ್ಲಿ ಗುರುವಾರ ಶ್ರೀಪಾದರ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
ಸ್ವಚ್ಛತೆ, ಸುಗಮ ಸಂಚಾರ ನಿರ್ವಹಣೆ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಆರೋಗ್ಯ ಸೇವೆ, ಅಗ್ನಿಶಾಮಕ, ಸುರಕ್ಷತೆ ಸೇರಿದಂತೆ ವಿವಿಧ ಮೂಲಸೌಕರ್ಯ ಹಾಗೂ ಸಾರ್ವಜನಿಕ ಸೌಲಭ್ಯಗಳ ಕುರಿತು ಚರ್ಚಿಸಲಾಯಿತು.
ಬಾಳೆಮೇಳಕ್ಕೆ ಆಗಮಿಸುವ ಸಾರ್ವಜನಿಕರು, ರೈತರು, ಉದ್ಯಮಿಗಳು ಹಾಗೂ ಸಂದರ್ಶಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ವಿವಿಧ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ ಜಿ. ಹುಬ್ಬಳ್ಳಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಉ. ಕಲ್ಗುಟಿಕರ್, ಉಡುಪಿ ನಗರ ಠಾಣೆ ಉಪನಿರೀಕ್ಷಕ ಭರತೇಶ್ ಕಂಕಣವಾಡಿ ಹಾಗೂ ಸಂಚಾರ ಠಾಣೆಯ ಉಪನಿರೀಕ್ಷಕ ಮಹೇಶ್ ಟಿ. ಉಪಸ್ಥಿತರಿದ್ದರು.
ಮಾಜಿ ಶಾಸಕ ಕೆ. ರಘುಪತಿ ಭಟ್, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ನಗರಸಭೆ ಮಾಜಿ ಸದಸ್ಯ ಗಿರೀಶ್ ಅಂಚನ್ ಮೊದಲಾದವರಿದ್ದರು.
ನ.29ರಂದು ಬೆಳಿಗ್ಗೆ 7.45ಕ್ಕೆ ಉಡುಪಿ ರಥಬೀದಿಯಲ್ಲಿರುವ ಸೋದೆ ಶ್ರೀವಾದಿರಾಜ ಮಠದಲ್ಲಿ ಬಾಳೆ ಮುಹೂರ್ತ ನೆರವೇರಲಿದೆ. ಬಳಿಕ 9.30ಕ್ಕೆ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ 'ಕದಳೀ ವಿಶ್ವದರ್ಶನ' ಬಾಳೆ ಮೇಳದ ಉದ್ಘಾಟನೆ ನಡೆಯಲಿದೆ. ಸಾರ್ಚಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.