ದೊಡ್ಡಣಗುಡ್ಡೆ ದುರ್ಗಾ ಆದಿಶಕ್ತಿ ಕ್ಷೇತ್ರ: ಅ.11ರಿಂದ ಶರನ್ನವರಾತ್ರಿ ಮಹೋತ್ಸವ

ಲೋಕಬಂಧು ನ್ಯೂಸ್ | ಉಡುಪಿ
ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇ.ಮೂ. ವಿಖ್ಯಾತ್ ಭಟ್ ಮತ್ತು ಗಣೇಶ ಸರಳಾಯ ನೇತೃತ್ವದಲ್ಲಿ ಅ.11ರಿಂದ 21ರ ತನಕ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ.
ದಿನಂಪ್ರತಿ ಊರ ಹಾಗೂ ಪರವೂರ ಭಕ್ತರ ಸೇವಾರೂಪದ ಜೋಡಿ ಚಂಡಿಕಾ ಯಾಗ, ಸಹಸ್ರ ನಾಮಾರ್ಚನೆ, ಕಲ್ಪೋಕ್ತ ಪೂಜೆ, ರಂಗ ಪೂಜೆ, ಶ್ರೀ ದುರ್ಗಾ ನಮಸ್ಕಾರ ಪೂಜೆ, ದೀಪಾರಾಧನೆ ಜರುಗಲಿದೆ. ಅ.13ರಂದು ಶ್ರೀ ಕುಬೇರ ಚಿತ್ರಲೇಖಾ ಸಹಿತ ಮಹಾಲಕ್ಷ್ಮೀ ಸಾನ್ನಿಧ್ಯದಲ್ಲಿ ಶ್ರೀ ಲಕ್ಷ್ಮೀ ಸಹಸ್ರನಾಮ ಪಾಯಸ ಹೋಮ, ಸಂಜೆ 6ರಿಂದ ದೀಪಾರಾಧನೆ ಸಹಿತ ರಂಗಪೂಜೆ ಜರುಗಲಿದೆ.


ಅ.15 ಹಾಗೂ ಅ.16ರಂದು ಶ್ರೀ ಲಲಿತಾ ಮಹಾತ್ರಿಪುರಸುಂದರಿ ಮಹಾಯಾಗ, ಅ.20ರಂದು ಶ್ರೀ ಪಂಚಮುಖಿ ಗಾಯತ್ರಿದೇವಿ ಸಾನ್ನಿಧ್ಯದಲ್ಲಿ ಶ್ರೀ ಗಾಯತ್ರಿ ಮಂತ್ರಹೋಮ, ಅ.21ರಂದು ವಿಜಯದಶಮಿ ಪರ್ವಕಾಲದಲ್ಲಿ ಕ್ಷೇತ್ರದ ವತಿಯಿಂದ ತ್ರಿಕುಂಡ ಆರು ತ್ರಿಚಂಡಿಕಾಯಾಗ, ಸಂಜೆ 6ರಿಂದ ಬಲಿ ಉತ್ಸವ, ಪಲ್ಲಕಿ ಉತ್ಸವ, ವಸಂತ ಪೂಜೆ, ಆರಾಧನಾ ರಂಗಪೂಜಾ ಮಹೋತ್ಸವ, ಮಹಾಮಂತ್ರಾಕ್ಷತೆ, ನಿರಂತರ ಅನ್ನಸಂತರ್ಪಣೆಯೊಂದಿಗೆ ಜರುಗಲಿದೆ.


ಅ.11ರ ಬೆಳಗ್ಗೆ 7ಕ್ಕೆ ಕದಿರು ಕಟ್ಟುವಿಕೆಯಿಂದ ನವರಾತ್ರಿ ಆರಂಭಗೊಳ್ಳಲಿದೆ. ಪ್ರತಿದಿನ ಲಲಿತಾ ಸಹಸ್ರನಾಮ ಪಠಣ, ಲಕ್ಷ್ಮೀ ಶೋಭಾನೆ ಪಠಣೆ ನೆರವೇರಲಿದೆ. ಪ್ರತಿದಿನ ವಿದ್ಯಾರಂಭ (ಅಕ್ಷರಾಭ್ಯಾಸ) ಹಾಗೂ ತುಲಾಭಾರ ಸೇವೆ ನಡೆಯಲಿದೆ.


ಮಕ್ಕಳಿಗೆ ವಿದ್ಯಾರಂಭ ಮಾಡಿಸುವವರು ಹಾಗೂ ವಿಶೇಷ ಸೇವೆಯಾಗಿ ಪರಿಗಣಿಸಲ್ಪಡುವ ಕಲಾಸೇವೆಯನ್ನು ಸಮರ್ಪಿಸುವ ಕಲಾವಿದರು ಶ್ರೀಕ್ಷೇತ್ರವನ್ನು ಸಂಪರ್ಕಿಸುವಂತೆ ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್ ಆಚಾರ್ಯ ತಿಳಿಸಿದ್ದಾರೆ.