ಲೋಕಬಂಧು ನ್ಯೂಸ್ ಕಾಪು
ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದ ದೀಪೋತ್ಸವಕ್ಕೆ ಬಂದಿದ್ದ 68 ವರ್ಷದ ವೃದ್ಧನಿಗೆ ಸುತ್ತಿಗೆಯಿಂದ ಹಲ್ಲೆ ನಡೆಸಿ, 4.50 ಲಕ್ಷ ರೂ. ಮೌಲ್ಯದ ಚಿನ್ನದ ಸರಬದೋಚಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಶಿರ್ವ ಪೊಲೀಸರು ಬುಧವಾರ ಬಂಧಿಸಿದ್ದಾರೆ.ಪಡುಬೆಳ್ಳೆಯ ಬಿ. ರಾಜಮೂರ್ತಿ ಭಟ್ (68) ಹಲ್ಲೆಗೊಳಗಾಗಿದ್ದು, ಅವರು ನ.24ರಂದು ಕುಂಜಾರುಗಿರಿ ದುರ್ಗಾದೇವಿ ದೇವಸ್ಥಾನದ ದೀಪೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ರಾತ್ರಿ ಮರಳುವಾಗ ಅವರಿಗೆ ಪರಿಚಯವಿದ್ದ ಮುರಳಿಕೃಷ್ಣ ಎಂಬಾತ ರಾತ್ರಿ ಸುಮಾರು 8.30 ಗಂಟೆಗೆ ಮಾತನಾಡುವುದಕ್ಕಿದೆ ಎಂದು ಹೇಳಿ ದೇವಸ್ಥಾನದಿಂದ ಹೊರಗೆ ಕರೆದುಕೊಂಡು ಹೋಗಿ ತನ್ನ ಕಾರಿನಲ್ಲಿ ಕೂರಿಸಿದ.
ತಾನು ಸುಮಾರು 60 ಎಕರೆ ಜಾಗದಲ್ಲಿ ಭತ್ತದ ಬೇಸಾಯ ಮಾಡುತ್ತಿದ್ದು, ಅದನ್ನು 200 ಎಕರೆಗೆ ವಿಸ್ತರಿಸಲು 25 ಲಕ್ಷ ರೂ. ಅಗತ್ಯವಿದ್ದು, ಸಹಾಯ ಮಾಡುವಂತೆ ವಿನಂತಿದ ಎನ್ನಲಾಗಿದೆ.
ದಕ್ಕೆ ರಾಜಮೂರ್ತಿ ಭಟ್ ಒಪ್ಪದಿದ್ದಾಗ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರಗಳನ್ನು ದೋಚುವ ಉದ್ದೇಶದಿಂದ ಎಗರಿಸಿ, ಸುತ್ತಿಗೆಯಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಎನ್ನಲಾಗಿದೆ.
ಬಳಿಕ ತಪ್ಪಿಸಿಕೊಳ್ಳಲು ಯತ್ನಿಸಿದ ರಾಜಮೂರ್ತಿ ಭಟ್' ನನ್ನು ಬೆನ್ನಟ್ಟಿ ದೂಡಿ, ಸುಮಾರು 20 ಗ್ರಾಂ ತೂಕದ ಚಿನ್ನದ ಸರ ಹಾಗೂ 28 ಗ್ರಾಂ ತೂಕದ ತುಳಸಿ ಮಣಿಗಳಿರುವ ಚಿನ್ನದ ಸರವನ್ನು ಕಿತ್ತುಕೊಂಡು ಕಾರು ಸಹಿತ ಪರಾರಿಯಾಗಿದ್ದ.
ದೋಚಿದ ಚಿನ್ನಾಭರಣಗಳ ಅಂದಾಜು ಮೌಲ್ಯ 4.50 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪಡುಬೆಳ್ಳೆ ಸಂಪತ್ ಬಾರ್ ಸಮೀಪದ ನಿವಾಸಿ ಮುರಳಿಕೃಷ್ಣ ಉಪಾಧ್ಯಾಯ (47) ಎಂಬಾತನನ್ನು ಬಂಧಿಸಿ, ಆತನಿಂದ ತುಳಸಿ ಮಣಿಗಳಿರುವ ತುಂಡಾದ ಚಿನ್ನದ ಸರ (ಅಂದಾಜು ಮೌಲ್ಯ 1.90 ಲಕ್ಷ ರೂ.) ಹಾಗೂ ತುಂಡಾದ ಹವಳದ ಚಿನ್ನದ ಸರ (ಅಂದಾಜು ಮೌಲ್ಯ 2.60 ಲಕ್ಷ ರೂ.) ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.