ಲೋಕಬಂಧು ನ್ಯೂಸ್ ಉಡುಪಿ
ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣಾ ಕಾಯ್ದೆ–2022 (ಮತಾಂತರ ನಿಷೇಧ ಕಾಯ್ದೆ) ರದ್ದುಗೊಳಿಸುವುದರೊಂದಿಗೆ ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ದುರ್ಬಲ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದ್ವೇಷಪೂರಿತ ಭಾಷಣಗಳು, ಕೋಮುವಾದಿ ಪ್ರಚೋದನೆ ಮತ್ತು ಹಿಂಸಾಚಾರದ ವಿರುದ್ಧ ಸಮಗ್ರ ರಕ್ಷಣಾ ನೀತಿ ರೂಪಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.ಈ ಕಾಯ್ದೆ ಧಾರ್ಮಿಕ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳು, ಧಾರ್ಮಿಕ ಗುರುತು ಮತ್ತು ನಂಬಿಕೆಯ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮತಾಂತರ ನಿಷೇಧ ಕಾಯ್ದೆ ಧಾರ್ಮಿಕ ಅಲ್ಪಸಂಖ್ಯಾತರ ಅಸ್ತಿತ್ವವನ್ನೇ ಅಪರಾಧೀಕರಿಸುವ ಅಪಾಯ ಹೊಂದಿದ್ದು, ಸಂವಿಧಾನ ಖಾತರಿಪಡಿಸಿರುವ ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತದೆ.
ವಿಶೇಷವಾಗಿ ಕ್ರೈಸ್ತ ಸಮುದಾಯ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ಈ ಕಾಯ್ದೆಯ ಜಾರಿ ಮತ್ತು ಪರಿಣಾಮಗಳು ತಮ್ಮ ಧಾರ್ಮಿಕ ಗುರುತು, ನಂಬಿಕೆ ಹಾಗೂ ಆಚರಣೆಗಳನ್ನು ಸ್ವತಂತ್ರವಾಗಿ ಅಭಿವ್ಯಕ್ತಪಡಿಸುವ ಹಕ್ಕಿನ ಮೇಲೆ ನಿರ್ಬಂಧ ಹೇರುವಂತಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಭಾರತೀಯ ಸಂವಿಧಾನದ ವಿಧಿ 25ರಡಿ ಪ್ರತಿಯೊಬ್ಬರಿಗೂ ಧರ್ಮವನ್ನು ನಂಬುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕಿದೆ. ಆದರೆ, ಪ್ರಸ್ತುತ ಕಾಯ್ದೆಯ ವ್ಯಾಪಕ ನಿರ್ಬಂಧ ಮತ್ತು ನಿಯಮಾವಳಿಗಳು ಶಾಸಕಾಂಗದ ಅಧಿಕಾರದ ಮಿತಿಯನ್ನು ಮೀರಿರುವ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳ ವಿಚಾರದಲ್ಲಿ ಕ್ರಿಮಿನಲ್ ಮೊಕದ್ದಮೆಯ ಭಯದ ವಾತಾವರಣ ನಿರ್ಮಾಣವಾಗುವ ಅಪಾಯವಿದೆ.
ವ್ಯಕ್ತಿಗಳು ಮತ್ತು ಸಮುದಾಯಗಳು ತಮ್ಮ ಧಾರ್ಮಿಕ ನಂಬಿಕೆಗಳ ನ್ಯಾಯಸಮ್ಮತತೆಯನ್ನು ನಿರಂತರವಾಗಿ ಸಮರ್ಥಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾದರೆ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅರ್ಥವಿರುವುದಿಲ್ಲ.
ಧಾರ್ಮಿಕ ಸ್ವಾತಂತ್ರ್ಯ, ಸಮಾನತೆ ಮತ್ತು ಮಾನವ ಘನತೆಯ ಸಾಂವಿಧಾನಿಕ ಆಶಯಗಳನ್ನು ಎತ್ತಿಹಿಡಿಯಲು ಈ ಕಾಯ್ದೆಯನ್ನು ರದ್ದುಗೊಳಿಸುವ ಮೂಲಕ ಕರ್ನಾಟಕ ಸರ್ಕಾರ ಮಾದರಿ ನಾಯಕತ್ವ ಪ್ರದರ್ಶಿಸಬೇಕು. ಅಲ್ಲದೆ, ಇತರ ರಾಜ್ಯಗಳಿಗೂ ಮಾದರಿಯಾಗುವ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದೇ ವೇಳೆ, ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಇತರ ದುರ್ಬಲ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದ್ವೇಷಪೂರಿತ ಭಾಷಣಗಳು, ಕೋಮುವಾದಿ ಪ್ರಚೋದನೆ ಮತ್ತು ಅಪರಾಧಗಳನ್ನು ತಡೆಯಲು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಬಲಪಡಿಸಿ, ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.
ಧಾರ್ಮಿಕ ಸಮುದಾಯಗಳು ನಿರಂತರವಾಗಿ ದ್ವೇಷ, ಕಿರುಕುಳ ಮತ್ತು ಹಿಂಸಾಚಾರದ ಬೆದರಿಕೆ ಎದುರಿಸುತ್ತಿರುವ ಸಂದರ್ಭದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಘನತೆಯಿಂದ ಬದುಕುವ ಹಕ್ಕನ್ನು ಸಂಪೂರ್ಣವಾಗಿ ರಕ್ಷಿಸಲು ಸಾಧ್ಯವಿಲ್ಲ. ತಾರತಮ್ಯ, ದ್ವೇಷ ಅಥವಾ ಹಿಂಸಾಚಾರವನ್ನು ಪ್ರಚೋದಿಸುವ ಭಾಷಣಗಳು ಶಾಂತಿಯುತ ಸಹಬಾಳ್ವೆಗೆ ಧಕ್ಕೆ ತರುವ ಜೊತೆಗೆ ಸಮಾಜದಲ್ಲಿ ಭಯ ಮತ್ತು ಅಭದ್ರತೆಯ ವಾತಾವರಣ ಸೃಷ್ಟಿಸುತ್ತವೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ದ್ವೇಷಪೂರಿತ ಭಾಷಣಗಳು ಮತ್ತು ಅಪರಾಧಗಳನ್ನು ತಡೆಯಲು ಕಾನೂನು ನಿಬಂಧನೆಗಳಿದ್ದರೂ ಅವುಗಳ ಪರಿಣಾಮಕಾರಿ ಅನುಷ್ಠಾನ ಅಗತ್ಯ. ಸಮಯೋಚಿತ ತನಿಖೆ, ವಿಚಾರಣೆ ಮತ್ತು ತಪ್ಪಿತಸ್ಥರ ಹೊಣೆಗಾರಿಕೆಯನ್ನು ಖಚಿತಪಡಿಸದಿರುವುದು ಇಂಥ ಕಾನೂನುಬಾಹಿರ ಚಟುವಟಿಕೆಗಳು ಮುಂದುವರಿಯಲು ಕಾರಣವಾಗುತ್ತಿದೆ. ಹಾಗಾಗಿ ದ್ವೇಷ ಭಾಷಣ ಮತ್ತು ದ್ವೇಷಪೂರಿತ ಅಪರಾಧಗಳನ್ನು ತಡೆಯುವ ಕಾನೂನು ಚೌಕಟ್ಟನ್ನು ಪರಿಶೀಲಿಸಿ ಬಲಪಡಿಸಬೇಕು. ಅಗತ್ಯವಿರುವ ಶಾಸಕಾಂಗ ತಿದ್ದುಪಡಿಗಳನ್ನು ಕೈಗೊಳ್ಳುವ ಜೊತೆಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಂವಿಧಾನಿಕ ಖಾತರಿಗೂ ಧಕ್ಕೆಯಾಗದಂತೆ ಕ್ರಮ ವಹಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ.
ಈ ವೇಳೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಮೆಲ್ವಿನ್ ಆರಾನ್ಹಾ, ಕಾರ್ಯದರ್ಶಿ ಜುಲಿಯೆಟ್ ಡಿ'ಸೋಜಾ, ಕೋಶಾಧಿಕಾರಿ ಗ್ಯಾರಿಫಿಲ್ಡ್ ಉರ್ಬಾನ್ ಲೂವಿಸ್, ನಿಯೋಜಿತ ಅಧ್ಯಕ್ಷ ಲೂಯಿಸ್ ಡಿ'ಸೋಜಾ, ಮಾಜಿ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್ ಮತ್ತು ಡಾ.ಜೆರಾಲ್ಡ್ ಪಿಂಟೊ, ಸಹಬಾಳ್ವೆಯ ಪ್ರೊ.ಫಣಿರಾಜ್ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಪರವಾಗಿ ಇಲಾಖೆಯ ಅಧಿಕಾರಿ ಮನವಿ ಸ್ವೀಕರಿಸಿದರು.