ಲೋಕಬಂಧು ನ್ಯೂಸ್ | ಪಡುಬಿದ್ರಿ
ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಅಕ್ಟೋಬರ್ 11ರಿಂದ 21ರ ವರೆಗೆ ಉಡುಪಿ ಉಚ್ಚಿಲ ದಸರಾ ಮಹೋತ್ಸವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಶ್ರೀಕ್ಷೇತ್ರದ ಶಾಲಿನಿ ಡಾ.ಜಿ. ಶಂಕರ್ ಸಭಾಂಗಣದಲ್ಲಿ ವೈಭವದಿಂದ ನಡೆಯಲಿದೆ ಎಂದು ದಸರಾ ಮಹೋತ್ಸವ ರೂವಾರಿ ಹಾಗೂ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ.ಜಿ.ಶಂಕರ್ ತಿಳಿಸಿದರು.
ಗುರುವಾರ ಉಚ್ಚಿಲ ಮೊಗವೀರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಈ ಬಾರಿ 5ನೇ ವರ್ಷದ ದಸರಾ ಮಹೋತ್ಸವ ಆಚರಿಸಲಾಗುತ್ತಿದ್ದು ರಾಜ್ಯದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ದುಂದುವೆಚ್ಚಕ್ಕೆ ಅವಕಾಶ ನೀಡದೇ ಸಂಪ್ರದಾಯ ಹಾಗೂ ಸ್ಥಳೀಯ ಸಂಸ್ಕೃತಿ, ಪ್ರತಿಭೆಗಳಿಗೆ ಅವಕಾಶ ನೀಡಿ ಶಿಸ್ತುಬದ್ಧವಾಗಿ ಆಚರಿಸಲಾಗುವುದು.
ಅ.11ರಂದು ಚಾಲನೆ
ಅ.11ರಂದು ಬೆಳಿಗ್ಗೆ 10 ಗಂಟೆಗೆ ಧಾರ್ಮಿಕ ದತ್ತಿ ಹಾಗೂ ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಬಸವಂತಪ್ಪ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, ಆರೋಗ್ಯ ಸಚಿವ ಯು.ಟಿ.ಖಾದರ್, ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಎಂ.ಲಮಾಣಿ, ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ, ಯಶಪಾಲ್ ಸುವರ್ಣ ಮೊದಲಾದ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಎಸ್.ಪಿ. ಹರಿರಾಮ್ ಶಂಕರ್ ಮೊದಲಾದವರು ಭಾಗವಹಿಸುವರು.
ನವದುರ್ಗೆಯರು ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಶ್ರೀಕ್ಷೇತ್ರದ ತಂತ್ರಿಗಳಾದ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತ ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಗುವುದು. ಅದಕ್ಕೂ ಮುನ್ನ ಬೆಳಿಗ್ಗೆ 7.30ಕ್ಕೆ ಧಾನ್ಯಲಕ್ಷ್ಮೀ ಪೂಜೆ (ತೆನೆ ಕಟ್ಟುವುದು), ನಿತ್ಯ ಚಂಡಿಕಾ ಹೋಮ ಇತ್ಯಾದಿ ನಡೆಯಲಿದೆ.
ಆಕರ್ಷಕ ವಸ್ತುಪ್ರರ್ಶನ
ದಸರಾ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿರುವ ಮತ್ಸ್ಯದ್ವಾರ, ದವಸ ದಾನ್ಯಗಳಿಂದ ಮಹಾಮಾತೆಯರು, ಜನಜಾಗೃತಿ ಕಲಾಕೃತಿಗಳು, ಕಲ್ಪವೃಕ್ಷ ಉತ್ಪನ್ನಗಳಿಂದ ವಿವಿಧ ಕಲಾಕೃತಿಗಳು, ವಿಶೇಷ ಚೇತನರಿಂದ ಕಲಾಕೃತಿಗಳು, ಪುಷ್ಪ ಪ್ರದರ್ಶನ, ಪಕ್ಷಿಗಳ ಪ್ರದರ್ಶನ, ಕೃಷಿಕರ ಪ್ರಾಚೀನ ಮನೆಯ ಮಾದರಿ, ಚರ್ಮ ವಾದ್ಯ ಪರಿಕರ ತಯಾರಿ, ಅಲಂಕಾರಿಕ ಕಲಾಕೃತಿಗಳ ವಿಶೇಷ ಪ್ರದರ್ಶನ, ಯಕ್ಷಗಾನ ಕಲಾಕೃತಿ, ಎತ್ತಿನಗಾಣ, ಸಮುದ್ರದ ಜೀವಂತ ಮೀನು ಹಾಗೂ ಹೊಳೆ ಮೀನುಗಳ ಪ್ರದರ್ಶನ, ಕರಕುಶಲ ವಸ್ತುಗಳ ತಯಾರಿಕೆ, ಚನ್ನಪಟ್ಟಣ ಬೊಂಬೆ ತಯಾರಿ ಸೇರಿದಂತೆ ವಿವಿಧ ಪ್ರದರ್ಶನಗಳ ಉದ್ಘಾಟನೆಯೂ ನಡೆಯಲಿದೆ ಎಂದು ಡಾ.ಜಿ. ಶಂಕರ್ ತಿಳಿಸಿದರು.
12ರಂದು ಮಹಿಳಾ ದಸರಾಕ್ಕೆ ಸಿಎಂ ಚಾಲನೆ
ಅ.12ರಂದು ಅಪರಾಹ್ನ 4 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ರೀಕ್ಷೇತ್ರಕ್ಕೆ ಆಗಮಿಸಲಿದ್ದು ಮಹಿಳಾ ದಸರಾಕ್ಕೆ ಚಾಲನೆ ನೀಡುವರು. ಮಹಿಳೆಯರ ಸಮಸ್ಯೆಗಳು ಅದರಲ್ಲೂ ಮಹಿಳಾ ಮೀನುಗಾರರ ಸಮಸ್ಯೆಗಳು, ಮೀನುಗಾರಿಕಾ ಬಂದರುಗಳ ಸಮಸ್ಯೆ ಇತ್ಯಾದಿಗಳ ಬಗ್ಗೆ ಮುಖ್ಯಮಂತ್ರಿ ಗಮನ ಸೆಳೆಯಲಾಗುವುದು. ಇದೇ ಸಂದರ್ಭದಲ್ಲಿ ತುಳುಭಾಷೆಗೆ ದ್ವಿತೀಯ ಆಡಳಿತ ಭಾಷೆಯ ಸ್ಥಾನಮಾನ ನೀಡಿದ್ದಕ್ಕಾಗಿ ಸಮಸ್ತ ತುಳುವರ ಪರವಾಗಿ ಅಭಿನಂದಿಸಲಾಗುವುದು. ಅಂದು ಕಾಸರಗೋಡು ಉಪ್ಪಳದಿಂದ ಶೀರೂರು ವರೆಗಿನ ಸುಮಾರು 10 ಸಾವಿರ ಮಂದಿ ಭಾಗವಹಿಸುವರು.
ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ
ಶರನ್ನವರಾತ್ರಿ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ಪ್ರತಿನಿತ್ಯ ಬೆಳಿಗ್ಗೆ ಚಂಡಿಕಾಹೋಮ, ಅನ್ನಸಂತರ್ಪಣೆ, ಪ್ರಸಾದ ವಿತರಣೆ, ಸಂಜೆ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ ಕಲ್ಪೋಕ್ತ ಪೂಜೆ ನಡೆಯಲಿದ್ದು, ವಿಜಯ ದಶಮಿಯಂದು ಸಾಮೂಹಿಕ ಮಹಾಚಂಡಿಕಾಯಾಗ ಹಾಗೂ ಮಹಾಪೂರ್ಣಾಹುತಿ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಬೆಳಿಗ್ಗೆ ಭಜನೆ, ಮಧ್ಯಾಹ್ನ ಭಕ್ತಿ ಗಾನ ಸುಧೆ (ಭಕ್ತಿ ಸಂಗೀತ) ಕಾರ್ಯಕ್ರಮ, ಸಂಜೆ ವಿದ್ವಾಂಸರಿಂದ ಧಾರ್ಮಿಕ ಪ್ರವಚನ, ಖ್ಯಾತ ಹಿನ್ನಲೆ ಗಾಯಕರಾದ ಅಲೋಕ್ ಬಾಬು ಅವರ `ಆಲ್ ಓಕೆ'ತಂಡದಿಂದ ಅದ್ದೂರಿ ಸಂಗೀತ ರಸಮಂಜರಿ, ಕೇರಳದ ಪ್ರಖ್ಯಾತ ಸಿತಾನಿ ಭಜನ್ಸ್ ಕೇರಳ ಅವರಿಂದ ಭಜನ್ ಫ್ಯೂಶನ್, ನಾಟ್ಯಾನಿಲಯಂ ಮಂಜೇಶ್ವರ ತಂಡದವರ ಜಾನಪದ ಹಾಗೂ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ, ಪುತ್ತೂರು ಜಗದೀಶ್ ಆಚಾರ್ಯ ಅವರಿಂದ ಸಂಗೀತ ಗಾನ ಸಂಭ್ರಮ, ಆಳ್ವಾಸ್ ಸಾಂಸ್ಕೃತಿಕ ವೈಭವ, ಭರತನಾಟ್ಯ, ಜಾನಪದ ನೃತ್ಯ, ನೃತ್ಯ ರೂಪಕ, ಸ್ಯಾಕ್ಸೋಫೋನ್ ವಾದನ/ ಶಾಸ್ತ್ರೀಯ ಸಂಗೀತ, ವೀಣಾವಾದನ, ತುಳು ನಾಟಕ ಪ್ರದರ್ಶನ ಇತ್ಯಾದಿ ನಡೆಯಲಿದೆ.
ವಿವಿಧ ಸ್ಪರ್ಧೆಗಳು
ರಾಜ್ಯ ಮಟ್ಟದ ಆಹ್ವಾನಿತ ತಂಡಗಳಿಂದ ನೃತ್ಯ ಸ್ಪರ್ಧೆ, ಮುದ್ದುಮಕ್ಕಳಿಗಾಗಿ ಶ್ರೀಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಮಹಿಳೆಯರ ಹುಲಿಕುಣಿತ ಸ್ಪರ್ಧೆ, ಸಣ್ಣ ಮಕ್ಕಳಿಂದ ಕಿನ್ನಿ ಪಿಲಿ ನಲಿಕೆ ಸ್ಪರ್ಧೆ, ಪುರುಷರ ಹುಲಿಕುಣಿತ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಉಡುಪಿ ಮತ್ತು ದ.ಕ. ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆ, ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿದೆ. ಜೊತೆಗೆ ಸಾಮೂಹಿಕ ಕುಣಿತ ಭಜನೆ, ಸಾಮೂಹಿಕ ದಾಂಡಿಯಾ ನೃತ್ಯ, ದಸರಾ ಕವಿಗೋಷ್ಟಿ ಇತ್ಯಾದಿ ಉಡುಪಿ ಉಚ್ಚಿಲ ದಸರಾದ ಮೆರುಗು ಹೆಚ್ಚಿಸಲಿವೆ ಎಂದು ಡಾ.ಜಿ.ಶಂಕರ್ ವಿವರಿಸಿದರು.
21ರಂದು ಶೋಭಾಯಾತ್ರೆ
ಉಡುಪಿ ಉಚ್ಚಿಲ ದಸರಾದ ಪ್ರಮುಖ ಆಕರ್ಷಣೆಯಾದ ಭವ್ಯ ಶೋಭಾಯಾತ್ರೆ ಅ.21ರಂದು ಶ್ರೀಕ್ಷೇತ್ರ ಉಚ್ಚಿಲದಿಂದ ಹೊರಡಲಿದೆ. ಅಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಮಹಾಪೂಜೆ, ಸಾಮೂಹಿಕ ಚಂಡಿಕಾ ಯಾಗ, ಮಹಾಅನ್ನಸಂತರ್ಪಣೆ, ಮಹಾಲಕ್ಷ್ಮೀ ಕಲ್ಪೋಕ್ತಪೂಜೆ ನಡೆದು ಅಪರಾಹ್ನ 2.30ಕ್ಕೆ ವಿಸರ್ಜನಾ ಪೂಜೆ ನಡೆಯಲಿದೆ. 3ರಿಂದ ಶ್ರೀಕ್ಷೇತ್ರ ಉಚ್ಚಿಲದಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಎರ್ಮಾಳ್, ಉಚ್ಚಿಲ, ಮೂಳೂರು ಮೂಲಕ ಸಾಗಿ ಕಾಪು ಬೀಚ್ (ದೀಪಸ್ತಂಭ) ತಲುಪಲಿದೆ.
ಕಾಪು ದೀಪಸ್ತಂಭದ ಸಮೀಪ ಸಮುದ್ರದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು ಶೋಭಾಯಾತ್ರೆಗೆ ಮತ್ತಷ್ಟು ಮೆರುಗು ನೀಡಲಿದೆ. ಬೋಟುಗಳ ಮೂಲಕ ಸಮುದ್ರ ಮಧ್ಯೆ ಭವ್ಯ ವಿದ್ಯುದ್ದೀಪಾಲಂಕಾರ, ಆಕರ್ಷಕ ಸುಡುಮದ್ದು ಪ್ರದರ್ಶನ, ಸುಮಂಗಲೆಯರಿಂದ ಸಾಮೂಹಿಕ ಮಂಗಳಾರತಿ, ಕಾಶಿಯ ಪಂಡಿತರಿಂದ ನವದುರ್ಗೆಯರು ಮತ್ತು ಶ್ರೀ ಶಾರದಾ ಮಾತೆ ಹಾಗೂ ಸಮುದ್ರರಾಜನಿಗೆ ವಿಶೇಷ ಗಂಗಾರತಿ, ಡ್ರೋನ್ ಮೂಲಕ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಗೆ ಪುಷ್ಪಾರ್ಚನೆ ನಡೆದು ಸಮುದ್ರದಲ್ಲಿ ಮೂರ್ತಿಗಳ ಜಲಸ್ತಂಭನ ನಡೆಯಲಿದೆ.
ಆಕರ್ಷಕ ದೀಪಾಲಂಕಾರ
ಉಡುಪಿ ಉಚ್ಚಿಲ ದಸರಾ ಮಹೋತ್ಸವ ಅಂಗವಾಗಿ ಪಡುಬಿದ್ರಿಯಿಂದ ಕಾಪು ವರೆಗೆ ಸುಮಾರು 10 ಕಿ.ಮೀ. ವರೆಗೆ ಆಕರ್ಷಕ ವಿದ್ಯುದ್ದೀಪಾಲಂಕಾರ ಮಾಡಲಾಗಿದ್ದು, ಅ.10ರಂದು ಸಂಜೆ 6.30 ಗಂಟೆಗೆ ಉದ್ಘಾಟಿಸಲಾಗುವುದು.
ದಸರಾ ಶೋಭಾಯಾತ್ರೆ ಸಾಗುವ ಮಾರ್ಗದ ಎರಡೂ ಬದಿಗಳಲ್ಲಿರುವ ಮನೆ, ಅಂಗಡಿ ಹಾಗೂ ಮಳಿಗೆಗಳನ್ನು ಜಾತಿ, ಮತ, ಧರ್ಮದ ಭೇದವಿಲ್ಲದೆ ವಿದ್ಯುದ್ದೀಪಾಲಂಕಾರ ಹಾಗೂ ತಳಿರು ತೋರಣಗಳಿಂದ ಅಲಂಕರಿಸುವ ಮೂಲಕ ದಸರಾ ಸಂಭ್ರಮಕ್ಕೆ ಮೆರುಗು ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸುವುದಾಗಿ ಡಾ.ಜಿ.ಶಂಕರ್ ತಿಳಿಸಿದರು.
ವಾಹನ ಪಾರ್ಕಿಂಗ್ ವ್ಯವಸ್ಥೆ
ದಸರಾ ಮಹೋತ್ಸವದ ಸಂದಭದಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಮಂಗಳೂರು ಕಡೆಯಿಂದ ಬರುವ ವಾಹನಗಳಿಗೆ ಸರಸ್ವತಿ ಶಾಲೆಯ ಮೈದಾನ ಹಾಗೂ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಲಾಗಿದೆ. ಉಡುಪಿ ಕಡೆಯಿಂದ ಬರುವ ವಾಹನಗಳಿಗೆ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ಪಕ್ಕದ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸನ್ನದ್ಧ ಸ್ವಯಂಸೇವಕರು
ಭಕ್ತಾದಿಗಳು ಸುಗಮವಾಗಿ ದೇವರ ದರ್ಶನ ಪಡೆಯಲು ಹಾಗೂ ಮಹಾಅನ್ನಸಂತರ್ಪಣೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಪ್ರತಿದಿನ ಸುಮಾರು 1,500 ಸ್ವಯಂಸೇವಕರು ಸೇವೆಯಲ್ಲಿ ತೊಡಗಲಿದ್ದಾರೆ. ಸ್ವಚ್ಛತಾ ಕಾರ್ಯಗಳಲ್ಲಿ ಮಹಿಳಾ ತಂಡಗಳು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸಹಕರಿಸಲಿದ್ದಾರೆ ದಸರಾ ಮಹೋತ್ಸವದ ದಿನಗಳಲ್ಲಿ ವಿವಿಧ ಸಚಿವರು, ಗಣ್ಯರು ಆಗಮಿಸಲಿದ್ದು, ಒಟ್ಟಾರೆ ಸುಮಾರು 10-15 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಡಾ.ಜಿ.ಶಂಕರ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉಪಾಧ್ಯಕ್ಷ ಮೋಹನ ಬೆಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲಿಯಾನ್, ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಎಸ್. ಸುವರ್ಣ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನಿಲ್, ಮೊಗವೀರ ಮಹಾಜನ ಸಂಘದ ಮಹಿಳಾ ಘಟಕ ಅಧ್ಯಕ್ಷೆ ಕವಿತಾ ಶರತ್, ದೇವಳದ ಮುಖ್ಯ ಪ್ರಬಂಧಕ ಸತೀಶ ಅಮೀನ್ ಪಡುಕೆರೆ ಮೊದಲಾದವರಿದ್ದರು.
.jpg)
.jpg)
.jpg)