ಶಂಕರ ಪ್ರತಿಷ್ಠಾನ ವಿಶೇಷ ಸಭೆ

ಲೋಕಬಂಧು ನ್ಯೂಸ್ | ಮಂಗಳೂರು
ಶೃಂಗೇರಿ ಜಗದ್ಗುರುಗಳ ಆದೇಶ ಮತ್ತು ಮಾರ್ಗದರ್ಶನದಲ್ಲಿ ಡಿ.28, 29 ಮತ್ತು 30ರಂದು ಉಡುಪಿಯಲ್ಲಿ ನಡೆಯುವ ಶ್ರೀಶಂಕರ ವಿಜಯೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೋಟೆಕಾರ್‌ನ ಶ್ರೀಶಂಕರ ಪ್ರತಿಷ್ಠಾನದ ವಿಶೇಷ ಸಭೆ ಶನಿವಾರ ನಗರದ ಬಾಳಂಭಟ್ ಹಾಲ್‌ನಲ್ಲಿ ಶೃಂಗೇರಿ‌ ಮಠ ಪ್ರಾಂತೀಯ ಧರ್ಮಾಕಾರಿ ಸತ್ಯಶಂಕರ ಬೊಳ್ಳಾವ ಅವರ ನೇತೃತ್ವದಲ್ಲಿ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಶ್ರೀ ಶಂಕರ ವಿಜಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಠಾಕೂರ್ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಶಂಕರ ವಿಜಯೋತ್ಸವವನ್ನು ನಾವೆಲ್ಲ ಸೇರಿ ಅತ್ಯಂತ ಯಶಸ್ವಿಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ, ಭಾಷಣ ಸೇರಿದಂತೆ ವಿವಿಧ ಸರ್ಧೆಗಳನ್ನು ಆಯೋಜಿಸಲಾಗಿದೆ.


ಈ ಕಾರ್ಯಕ್ರಮ ಕೇವಲ ಆಧ್ಯಾತ್ಮಿಕವಾಗಿರದೆ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಯಲ್ಲೂ ಅರ್ಥಪೂರ್ಣವಾಗಿ ನಡೆಯುವಂತಾಗಬೇಕು. ಅದಕ್ಕಾಗಿ ಅರ್ಹ ಬಡವರಿಗೆ ಆಟೋರಿಕ್ಷಾ, ಬಡಮಹಿಳೆಯರಿಗೆ ಹೊಲಿಗೆ ಯಂತ್ರ, ನೇತ್ರ ಚಿಕಿತ್ಸಾ ಶಿಬಿರ, ಕನ್ನಡಕ ವಿತರಣೆಯಂಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.


ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆ, ರಥಯಾತ್ರೆ ಬಗ್ಗೆಯೂ ಅವರು ಮಾಹಿತಿ ನೀಡಿದರು.


ಸತ್ಯಶಂಕರ ಬೊಳ್ಳಾವ ಅವರು ಶ್ರೀಶಂಕರ ವಿಜಯೋತ್ಸವ ಕುರಿತು ವಿವರ ನೀಡಿ, ಹಿಂದೂ ಧರ್ಮಕ್ಕೆ ಆಪತ್ತು ಎದುರಾದಾಗ ಅವತರಿಸಿದ ಶ್ರೀಶಂಕರರು ಹೇಗೆ ಧರ್ಮವನ್ನು ಉಳಿಸಿದರು ಎಂಬುದನ್ನು ತಿಳಿಸಿದರು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಬೇಕಾದ ಅಗತ್ಯ ಸಿದ್ದತೆಗಳ ಬಗ್ಗೆ ಮಾಹಿತಿ ನೀಡಿದರು.


ನ.22ರಂದು ಆರಂಭೋತ್ಸವ
ಮುಂದಿನ ಸಭೆಯನ್ನು ನ.14ರಂದು ಅಪರಾಹ್ನ 2.30ಕ್ಕೆ ಬಾಳಂಭಟ್ ಹಾಲ್‌ನಲ್ಲಿ ನಡೆಸಲಾಗುವುದು. ನ.22ರಂದು ಶ್ರೀಶಂಕರ ವಿಜಯೋತ್ಸವದ ಆರಂಭೋತ್ಸವ ಅದೇ ಹಾಲ್‌ನಲ್ಲಿ ಅಪರಾಹ್ನ 4 ಗಂಟೆಗೆ ನಡೆಯಲಿದೆ ಎಂದವರು ತಿಳಿಸಿದರು.


ವೇದಿಕೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಕಾರ್ಯದರ್ಶಿ ನರೇಶ್ ಮಲ್ಲಿಗೆಮಾಡು, ಚಂದ್ರಶೇಖರ ಉಚ್ಚಿಲ, ಕಾರ್ಯದರ್ಶಿ ಕೈಯ್ಯಾರು ನಾರಾಯಣ ಭಟ್, ಮಾಜಿ ಶಾಸಕ ಬಾಲಕೃಷ್ಣ ಭಟ್ ಉಪಸ್ಥಿತರಿದ್ದರು.


ವಿವಿಧ ಸಮುದಾಯಗಳ ಪ್ರಮುಖರು ಸಲಹೆ- ಸೂಚನೆ ನೀಡಿದರು. ಶ್ರೀಶಂಕರ ವಿಜಯೋತ್ಸವ ಸಮಿತಿ ಕಾರ್ಯದರ್ಶಿ ಡಾ.ಸತ್ಯಕೃಷ್ಣ ಭಟ್ ಕಾರ್ಯಕ್ರಮದ ಯಶಸ್ಸಿಗೆ ನಮ್ಮ ಸಿದ್ಧತೆ ಮತ್ತು ಪಾಲ್ಗೊಳ್ಳುವಿಕೆ ಬಗ್ಗೆ ತಿಳಿಸಿದರು.