ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿ ಇದೆ

ಲೋಕಬಂಧು ನ್ಯೂಸ್ ಬೆಂಗಳೂರು
ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರಕ್ಕೆ ನಂಬಿಕೆ ಮತ್ತು ಸಹಾನುಭೂತಿ ಇದೆ. ನೀವು ಜನರ ಸೇವೆ ಮಾಡುತ್ತಿದ್ದೀರಿ. ಆದರೆ, ಬೇಡಿಕೆಗಳ ಬಗ್ಗೆ ಒಂದೇ ದಿನಕ್ಕೆ ತೀರ್ಮಾನ ಮಾಡಲಾಗುವುದಿಲ್ಲ. ಸಂಬಂಧಪಟ್ಟ ಸಚಿವರು, ಸಚಿವ ಸಂಪುಟ ಸಭೆ ಹಾಗೂ ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಆಶಾ ಕಾರ್ಯಕರ್ತೆಯರಿಗೆ ಭರವಸೆ ನೀಡಿದರು.ಗೃಹ ಕಚೇರಿ ಕೃಷ್ಣಾದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪ್ರತಿನಿಧಿಗಳ ಜೊತೆ ಗುರುವಾರ ಸಭೆ ನಡೆಸಿ, ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.


ಎಸ್ಐಆರ್ ಹಾಗೂ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯ ಕೆಲಸ ಮಾಡಿದ್ದಕ್ಕೆ ಯಾವುದೇ ಗೌರವಧನ ಬಂದಿಲ್ಲ ಎಂದು ಆಶಾ ಕಾರ್ಯಕರ್ತೆಯರು ತಿಳಿಸಿದಾಗ ಸಮೀಕ್ಷಾ ಕಾರ್ಯಗಳಿಗೆ ಬಳಸಿಕೊಂಡ ಮೇಲೆ ಗೌರವಧನ ಕೊಡಬೇಕು. ಆ ಬಗ್ಗೆ ಕ್ರಮ ಕೈಗೊಳ್ಳುವುದಾಗಿ   ಆಶ್ವಾಸನೆ ನೀಡುವ ಜೊತೆಗೆ ಸರ್ಕಾರದೊಂದಿಗೆ ಸಹಕರಿಸಿ ಪ್ರತಿಭಟನೆ ನಿಲ್ಲಿಸಿ‌ಎಂದು ಮನವಿ ಮಾಡಿದರು.


ಗೃಹಲಕ್ಷ್ಮಿ ಯೋಜನೆಯಡಿ ಆಶಾ ಕಾರ್ಯಕರ್ತೆಯರನ್ನು ಸೇರಿಸಬಾರದು ಎಂದಾಗ ಅದನ್ನು ನಾವು ಒಪ್ಪದೆ ಯೋಜನೆ ಕೊಟ್ಟಿದ್ದೇವೆ. ಉಚಿತ ಬಸ್ಸು, ವಿದ್ಯುತ್ ಕೊಟ್ಟಿದ್ದೇವೆ. ನಿಮ್ಮ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡೇ ಗ್ಯಾರಂಟಿ ಯೋಜನೆಗಳನ್ನು  ಕೊಟ್ಟಿದ್ದೇವೆ. ನನ್ನ ಮೇಲೆ ವಿಶ್ವಾಸವಿರಲಿ. ನಿಮಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ" ಎಂದರು.


ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಪಿಂಚಣಿ ಯೋಜನೆ ಜಾರಿ ಮಾಡಿದ್ದು ನಮ್ಮ ಸರ್ಕಾರ. ಕೇಂದ್ರ ಸರ್ಕಾರ ತನ್ನ ಪಾಲಿನ ಹಣವನ್ನು ಹೆಚ್ಚಳ ಮಾಡಿಲ್ಲ‌‌ ಎಂದರು.


ರಾಜ್ಯದ ಸುಮಾರು 41 ಸಾವಿರ ಆಶಾ ಕಾರ್ಯಕರ್ತೆಯರ ಸೇವೆ ಹಾಗೂ ಅವರ ಆರ್ಥಿಕ ಸಂಕಷ್ಟದ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಸಹಾನುಭೂತಿ ಇದೆ. ಅವರ ಗೌರವಧನ ಹೆಚ್ಚಳದ ಬೇಡಿಕೆಯನ್ನು ತಳ್ಳಿಹಾಕುವುದಿಲ್ಲ ಎಂದರು.