ಲೋಕಬಂಧು ನ್ಯೂಸ್ | ಉಡುಪಿ
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಹೃದ್ರೋಗ ವಿಭಾಗವ ಅಂತಾರಾಷ್ಟ್ರೀಯ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದು, ಥಾಯ್ಲೆಂಡ್ನಲ್ಲಿ ನಡೆದ 17ನೇ ಸಿಐಎಟಿ ವಾರ್ಷಿಕ ವೈಜ್ಞಾನಿಕ ಸಮ್ಮೇಳನ ಅಂಗವಾಗಿ ಆಸ್ಪತ್ರೆಯ ಹೃದ್ರೋಗ ಕ್ಯಾಥ್ ಲ್ಯಾಬ್ನಿಂದ ಸಂಕೀರ್ಣ ಹೃದಯ ರಕ್ತನಾಳ ಚಿಕಿತ್ಸಾ ವಿಧಾನದ ನೇರ ಪ್ರಸಾರವನ್ನು ಆಯೋಜಿಸುವ ಮೂಲಕ ಅಂತಾರಾಷ್ಟ್ರೀಯ ವೈದ್ಯಕೀಯ ವೇದಿಕೆಯಲ್ಲಿ ತನ್ನ ಪರಿಣತಿಯನ್ನು ಪ್ರದರ್ಶಿಸಿದೆ.ಆಗ್ನೇಯ ಏಷ್ಯಾದ ಪ್ರಮುಖ ಹೃದ್ರೋಗ ತಜ್ಞರು ಭಾಗವಹಿಸಿದ್ದ ಈ ಸಮ್ಮೇಳನದ ವೈಜ್ಞಾನಿಕ ಕಾರ್ಯಕ್ರಮದ ಭಾಗವಾಗಿ ಲೇಸರ್ ಆಂಜಿಯೋಪ್ಲಾಸ್ಟಿ ಚಿಕಿತ್ಸಾ ವಿಧಾನದ ನೇರ ಪ್ರಸಾರ ನಡೆಯಿತು. ಮಣಿಪಾಲದಲ್ಲಿ ನಡೆಯುತ್ತಿದ್ದ ಚಿಕಿತ್ಸಾ ಪ್ರಕ್ರಿಯೆಯನ್ನು ಥಾಯ್ಲೆಂಡ್ನಲ್ಲಿದ್ದ ಸಮ್ಮೇಳನದ ಪ್ರತಿನಿಧಿಗಳು ನೇರವಾಗಿ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿತ್ತು.
ಹೃದ್ರೋಗ ಸಮ್ಮೇಳನಗಳಲ್ಲಿ ಲೈವ್ ಕೇಸ್ ಟ್ರಾನ್ಸ್ಮಿಷನ್ ಒಂದು ಪ್ರಮುಖ ಶೈಕ್ಷಣಿಕ ವಿಧಾನವಾಗಿದೆ. ಈ ವ್ಯವಸ್ಥೆಯ ಮೂಲಕ ವಿವಿಧ ಆಸ್ಪತ್ರೆಗಳಲ್ಲಿ ನಡೆಯುವ ಸಂಕೀರ್ಣ ಚಿಕಿತ್ಸಾ ವಿಧಾನಗಳನ್ನು ವೈದ್ಯರು ನೇರವಾಗಿ ವೀಕ್ಷಿಸಬಹುದಾಗಿದೆ. ಚಿಕಿತ್ಸೆಯ ಯೋಜನೆ, ತಂತ್ರಜ್ಞಾನದ ಬಳಕೆ, ವೈದ್ಯಕೀಯ ನಿರ್ಧಾರಗಳು ಹಾಗೂ ಚಿಕಿತ್ಸೆಯ ವಿವಿಧ ಹಂತಗಳ ಕುರಿತು ತಜ್ಞರಿಂದ ಮಾಹಿತಿ ಪಡೆಯಲು ಇದು ಸಹಕಾರಿಯಾಗಿದೆ.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಒಂದಕ್ಕಿಂತ ಹೆಚ್ಚು ಹೃದಯ ರಕ್ತನಾಳಗಳಲ್ಲಿ ಅಡಚಣೆ ಹೊಂದಿದ್ದ ರೋಗಿಯೊಬ್ಬರಿಗೆ ಲೇಸರ್ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನಡೆಸಲಾಯಿತು. ಸಂಕೀರ್ಣ ಹೃದಯ ರಕ್ತನಾಳ ಕಾಯಿಲೆ ಹೊಂದಿರುವ ಆಯ್ದ ರೋಗಿಗಳ ಚಿಕಿತ್ಸೆಯಲ್ಲಿ ಇಂಟ್ರಾಕೊರೊನರಿ ಇಮೇಜಿಂಗ್ ತಂತ್ರಜ್ಞಾನದೊಂದಿಗೆ ಲೇಸರ್ ಆಂಜಿಯೋಪ್ಲಾಸ್ಟಿಯನ್ನು ಹೇಗೆ ಬಳಸಬಹುದು ಎಂಬುದನ್ನು ಈ ಸಂದರ್ಭದಲ್ಲಿ ವಿವರಿಸಲಾಯಿತು.
ರೋಗಿಯ ಆರೋಗ್ಯ ಸ್ಥಿತಿ ಮತ್ತು ವೈದ್ಯಕೀಯ ತಪಾಸಣೆಯ ಆಧಾರದ ಮೇಲೆ ಸೂಕ್ತ ಚಿಕಿತ್ಸಾ ವಿಧಾನವನ್ನು ನಿರ್ಧರಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಸ್ತೂರ್ಬಾ ಆಸ್ಪತ್ರೆಯ ಹೃದ್ರೋಗ ವಿಭಾಗದ ಘಟಕ ಮುಖ್ಯಸ್ಥರಾದ ಪ್ರೊ. ಟಾಮ್ ದೇವಾಸಿಯಾ ಅವರು ಡಾ. ಮೋನಿಕಾ ಜೆ. ಮತ್ತು ಡಾ. ಶಾರ್ದೂಲ್ ದೇಶಮುಖ್ ಅವರೊಂದಿಗೆ ಚಿಕಿತ್ಸಾ ಪ್ರಕ್ರಿಯೆ ನಡೆಸಿಕೊಟ್ಟರು. ಚಿಕಿತ್ಸೆಯ ವಿವಿಧ ಹಂತಗಳಲ್ಲಿ ಲೇಸರ್ ತಂತ್ರಜ್ಞಾನ ಹಾಗೂ ಇಂಟ್ರಾಕೊರೊನರಿ ಇಮೇಜಿಂಗ್ ಸೌಲಭ್ಯಗಳ ಬಳಕೆಯನ್ನು ಸಮ್ಮೇಳನದ ಪ್ರತಿನಿಧಿಗಳಿಗೆ ವಿವರಿಸಲಾಯಿತು.
ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಈ ಬಗ್ಗೆ ಪ್ರತಿಕ್ರಯಿಸಿ, ಕ್ಯಾಥ್ ಲ್ಯಾಬ್ ಮತ್ತು ಕ್ಲಿನಿಕಲ್ ತಂಡಗಳ ಸಹಕಾರದೊಂದಿಗೆ ಆಸ್ಪತ್ರೆಯಲ್ಲಿ ಸಮರ್ಪಿತ ಇಂಟರ್ವೆನ್ಷನಲ್ ಹೃದ್ರೋಗ ತಜ್ಞರ ತಂಡ ಕಾರ್ಯನಿರ್ವಹಿಸುತ್ತಿದೆ. ಇಂಥ ಅಂತಾರಾಷ್ಟ್ರೀಯ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ನಮ್ಮ ವೈದ್ಯಕೀಯ ಅನುಭವ ಮತ್ತು ಪರಿಣತಿಯನ್ನು ಜಾಗತಿಕ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಲು ಹಾಗೂ ಅವರಿಂದ ಹೊಸ ವಿಚಾರಗಳನ್ನು ಕಲಿಯಲು ಉತ್ತಮ ಅವಕಾಶ ದೊರೆಯುತ್ತದೆ ಎಂದರು.
ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಡಾ. ಸುಧಾಕರ್ ಕಂಟಿಪುಡಿ ಮಾತನಾಡಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಲೇಸರ್ ಆಂಜಿಯೋಪ್ಲಾಸ್ಟಿ ವ್ಯವಸ್ಥೆ ಹಾಗೂ ಇಂಟ್ರಾಕೊರೊನರಿ ಇಮೇಜಿಂಗ್ ಸೌಲಭ್ಯಗಳು ಲಭ್ಯವಿವೆ. ಈ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳ ನೆರವಿನಿಂದ ಸಂಕೀರ್ಣ ಹೃದಯ ರಕ್ತನಾಳ ಚಿಕಿತ್ಸಾ ವಿಧಾನಗಳನ್ನು ಈ ಭಾಗದ ರೋಗಿಗಳಿಗೆ ಒದಗಿಸಲು ಸಾಧ್ಯವಾಗಿದೆ ಎಂದರು.
ಹೃದ್ರೋಗ ಚಿಕಿತ್ಸೆಯಲ್ಲಿನ ಆಧುನಿಕ ತಂತ್ರಜ್ಞಾನ, ವೈದ್ಯಕೀಯ ಪರಿಣತಿ ಮತ್ತು ಸಂಶೋಧನಾ ಅನುಭವವನ್ನು ಅಂತಾರಾಷ್ಟ್ರೀಯ ವೈದ್ಯಕೀಯ ಸಮುದಾಯದೊಂದಿಗೆ ಹಂಚಿಕೊಳ್ಳುವಲ್ಲಿ ಕಸ್ತೂರ್ಬಾ ಆಸ್ಪತ್ರೆ ನಿರಂತರವಾಗಿ ತೊಡಗಿಸಿಕೊಂಡಿದೆ. ಥಾಯ್ಲೆಂಡ್ನ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಮಣಿಪಾಲದಿಂದ ಚಿಕಿತ್ಸೆಯ ನೇರ ಪ್ರಸಾರ ನಡೆದಿರುವುದು ಈ ಪ್ರಯತ್ನಕ್ಕೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿದೆ. ಜಾಗತಿಕ ವೈದ್ಯಕೀಯ ವೇದಿಕೆಯಲ್ಲಿ ಮಣಿಪಾಲದ ವೈದ್ಯಕೀಯ ಪರಿಣತಿಗೆ ದೊರೆತ ಮನ್ನಣೆಯಾಗಿ ಈ ಕಾರ್ಯಕ್ರಮ ಗುರುತಿಸಿಕೊಂಡಿದೆ.