ಬೈಕ್ ಕಳವು ಪ್ರಕರಣ ಭೇದಿಸಿದ ಪೊಲೀಸರು;ಆರೋಪಿ ಬಂಧನ, ಕಳವಾದ ಬೈಕ್ ವಶಕ್ಕೆ

ಲೋಕಬಂಧು ನ್ಯೂಸ್ | ಮಣಿಪಾಲ
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದಲ್ಲಿ ನಡೆದಿದ್ದ ಮೋಟಾರು ಸೈಕಲ್ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸಿ ಕಳವಾದ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ.
ಶಿವಳ್ಳಿ ಗ್ರಾಮದ ಆರ್‌ಎಸ್‌ಬಿ ಸಭಾಭವನದ ಸಮೀಪದ ವೇಘಾ ಟ್ರಾನ್ಸ್‌ಪೋರ್ಟ್ಸ್‌ ಬಳಿಯ ಶೆಡ್‌ನಲ್ಲಿ ನಿಲ್ಲಿಸಿದ್ದ‌ ಕೆಎ20 ಕೆಯು 3431 ನೋಂದಣಿ ಸಂಖ್ಯೆಯ ಹೋಂಡಾ ಶೈನ್ ಬೈಕ್‌ನ್ನು ಅ.20ರಂದು ಬೆಳಿಗ್ಗೆ 9.30ಕ್ಕೆ ನಿಲ್ಲಿಸಿ ಅದರ ಮಾಲೀಕರು ಹುಬ್ಬಳ್ಳಿಗೆ ತೆರಳಿದ್ದರು. ಅ.22ರಂದು ರಾತ್ರಿ 9 ಗಂಟೆಗೆ ಮರಳಿ ಬಂದಾಗ ಬೈಕ್ ಕಾಣೆಯಾಗಿತ್ತು. ಆ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಪ್ರಕರಣದ ತನಿಖೆ ನಡೆಸುತ್ತಿದ್ದ ಮಣಿಪಾಲ ಪೊಲೀಸರು ನ.18ರಂದು ಶಿವಳ್ಳಿ ಗ್ರಾಮದ ಮಣ್ಣಪಳ್ಳ ಕೆರೆ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ವ್ಯಕ್ತಿಯನ್ನು ತಡೆದು ವಿಚಾರಣೆ ನಡೆಸಿದರು. ಆ ವೇಳೆ ಆತ ತಾನು ಬೆಂಗಳೂರಿನ ಮಾರೆನಹಳ್ಳಿಯ ಮನೀಶ್ ಎ. ಎಂದು ಹೇಳಿದ್ದು, ಆತನ ಬಳಿಯಿದ್ದ ಬೈಕ್ ಪರಿಶೀಲಿಸಿದಾಗ ಅದು ಕಳವಾದ ಹೋಂಡಾ ಶೈನ್ ಬೈಕ್ ಎಂಬುದು ದೃಢಪಟ್ಟಿದೆ.


ಬೈಕ್ ಕಳವು ಮಾಡಿರುವುದಾಗಿ ಆತ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.



ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಅವರ ನಿರ್ದೇಶನದಲ್ಲಿ ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ಹಾಗೂ ಪಿಎಸ್‌ಐ ಶಂಭುಲಿಂಗಯ್ಯ ಎಂ.  ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.


ಮಣಿಪಾಲ ಠಾಣೆಯ ಎಎಸ್‌ಐ ವಿವೇಕಾನಂದ, ಹೆಡ್‌ಕಾನ್‌ಸ್ಟೆಬಲ್ ಮಹಮ್ಮದ್ ಅಜ್ಮಲ್ ಹಾಗೂ ಪೊಲೀಸ್ ಸಿಬ್ಬಂದಿ ಮಂಜುನಾಥ ಎಂ.ಆರ್. ಕಾರ್ಯಾಚರಣೆಯಲ್ಲಿ ಸಹಕರಿಸಿದರು