ಲೋಕಬಂಧು ನ್ಯೂಸ್ ಬೆಂಗಳೂರು
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನನಗೆ ತೃಪ್ತಿಯಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ತನ್ವೀರ್ ಸೇಠ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆ ನನ್ನ ಹಿರಿತನಕ್ಕೆ ತಕ್ಕುದಲ್ಲ. ಇದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಹುದ್ದೆಯೂ ಅಲ್ಲ. ಈ ಹುದ್ದೆ ನೀಡುವುದು ಬೇಡ ಎಂದು ಈ ಹಿಂದೆಯೇ ತಿಳಿಸಿದ್ದೆ. ಆದರೂ ನನಗೆ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ ಎಂದಿದ್ದಾರೆ.
ಈವರೆಗೆ ಮುಖ್ಯಮಂತ್ರಿ ಕಚೇರಿಯಿಂದ ನನಗೆ ಯಾವುದೇ ಕರೆ ಬಂದಿಲ್ಲ. ರಾಜಕೀಯ ಕಾರ್ಯದರ್ಶಿ ಹುದ್ದೆಯನ್ನು ಸ್ವೀಕರಿಸಬೇಕೋ ಅಥವಾ ಬೇಡವೋ ಎಂಬುದನ್ನು ನಾನೇ ನಿರ್ಧರಿಸುತ್ತೇನೆ ಎಂದವರು ತಿಳಿಸಿದ್ದಾರೆ.
ಸರ್ಕಾರ ನಿಗಮ- ಮಂಡಳಿಗಳ ಅಧ್ಯಕ್ಷರು ಹಾಗೂ ವಿವಿಧ ಹುದ್ದೆಗಳಿಗೆ ನೇಮಕಾತಿ ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ ತನ್ವೀರ್ ಸೇಠ್ ಅವರ ಈ ಅಸಮಾಧಾನ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.