ಲೋಕಬಂಧು ನ್ಯೂಸ್ ಕಾಪು
ಕಾಪು ಬೀಚ್ನ ಸಮುದ್ರದಲ್ಲಿ ಆಡುತ್ತಿದ್ದ ಇಬ್ಬರು ನೀರು ಪಾಲಾಗಿರುವ ಘಟನೆ ಭಾನುವಾರ ಸಂಜೆ ಸಂಭವಿಸಿದೆ.ದಾವಣಗೆರೆಯ ಜಿಯಾವುಲ್ಲಾ ಹಾಗೂ ಅವರ ಸಂಬಂಧಿಕರು ಒಟ್ಟು 10-12 ಮಂದಿ ಕುಟುಂಬ ಸದಸ್ಯರು ಪ್ರವಾಸದ ನಿಮಿತ್ತ ಕಾಪು ಬೀಚ್ಗೆ ಆಗಮಿಸಿದ್ದು ಅಪರಾಹ್ನ 4.30ರ ಸುಮಾರಿಗೆ ಅವರ ಕುಟುಂಬದ ಮಕ್ಕಳು ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಮೊಹಮ್ಮದ್ ಇಸಾಕ್, ಸಮೀರ್ ಭಾಷಾ ಹಾಗೂ ಮಲ್ಲಿಕ್ ರಿಯಾನ್ ಎಂಬವರು ಸಮುದ್ರದ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದರು.
ಆ ವೇಳೆ ಸ್ಥಳೀಯರು ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಮೊಹಮ್ಮದ್ ಇಸಾಕ್ ಎಂಬಾತನನ್ನು ರಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಸಮೀರ್ ಭಾಷಾ (20) ಹಾಗೂ ಮಲ್ಲಿಕ್ ರಿಯಾನ್ (15) ಸಮುದ್ರದಲ್ಲಿ ನಾಪತ್ತೆಯಾಗಿದ್ದು ಅವರ ಪತ್ತೆಗಾಗಿ ಸ್ಥಳೀಯರು ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ಸಹಕಾರದೊಂದಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.
ನೀರುಪಾಲಾದವರಲ್ಲಿ ಓರ್ವ ಉಡುಪಿಯಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದು, ಆತನನ್ನು ಭೇಟಿಯಾಗಲು ದಾವಣಗೆರೆ ಕುಟುಂಬ ಉಡುಪಿಗೆ ಬಂದಿತ್ತೆನ್ನಲಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿದ ಕಾಪು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.