ಲೋಕಬಂಧು ನ್ಯೂಸ್, ಉಡುಪಿ
ಪ್ರತೀ ಪರ್ಯಾಯ ಸಂದರ್ಭದಲ್ಲಿಯೂ ಪರ್ಯಾಯ ಪೀಠವೇರುವ ಮಠದಿಂದ ಇತರ ಏಳು ಮಠಗಳಿಗೆ ಒಲಿಪೆ ನೀಡುವ ಸಂಪ್ರದಾಯ ನಡೆದುಕೊಂಡು ಬಂದಿದ್ದು, ಅದರಂತೆ ಶುಕ್ರವಾರ ಭಾವಿ ಪರ್ಯಾಯ ಶೀರೂರು ಮಠ ವತಿಯಿಂದ ಒಲಿಪೆ ನೀಡಲಾಯಿತು.
ಪರ್ಯಾಯ ಸಂದರ್ಭದಲ್ಲಿ ಆಗಮಿಸುವ ಭಕ್ತರ ಆತಿಥ್ಯಕ್ಕೆ ಭಾವಿ ಪರ್ಯಾಯ ಮಠದಿಂದ ನೀಡುವ ವಸ್ತುರೂಪದ ಕಾಣಿಕೆ, ನಾಡಿನ ಬೇರೆ ಬೇರೆ ಭಾಗದಿಂದ ಬರುವ ಭಕ್ತರು ಇತರ ಮಠಗಳಲ್ಲಿ ತಂಗಲಿದ್ದು ಆಗಮಿಸಿದ ಭಕ್ತರಿಗೆ ಊಟೋಪಚಾರ, ಔಷಧೋಪಚಾರ ಹೀಗೆ ಅತ್ಯಗತ್ಯ ಬಳಕೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಒಲಿಪೆಯಲ್ಲಿ ನೀಡಲಾಗುತ್ತದೆ.
ಸಂಪ್ರದಾಯದಂತೆ ಬುಟ್ಟಿಯಲ್ಲಿ ಮಠದ ದೇವರ ಪೂಜೆಗೆ ಜೋಡು ತೆಂಗಿನಕಾಯಿ, ಪಿಂಗಾರ, ಗಂಧದ ಕೊರಡು ಮತ್ತು ಹೂಮಾಲೆ. ಮತ್ತೊಂದು ಬುಟ್ಟಿಯಲ್ಲಿ ಪ್ರತೀ ಮಠದ ಪಾರುಪತ್ಯಗಾರರಿಗೆ ನೀಡುವ ವಸ್ತುಗಳು. ಉಳಿದಂತೆ ಬೇರೆ ಬೇರೆ ಬುಟ್ಟಿಗಳಲ್ಲಿ ಅಕ್ಕಿ, ಬೇಳೆ, ತರಕಾರಿ, ಬಾಳೆಎಲೆ, ಸೀಯಾಳ, ಹಗ್ಗ, ಔಷದೀಯ ವಸ್ತುಗಳು, ಹೀಗೆ ದಿನ ಬಳಕೆಯ ಅಗತ್ಯದ ವಸ್ತುಗಳನ್ನು ನೀಡಲಾಗುತ್ತದೆ. ಒಂದೆಡೆ ಸಂಪ್ರದಾಯ ಪಾಲನೆಯಾದರೆ ಇನ್ನೊಂದೆಡೆ ಇಂದಿಗೂ ನಾರಿನ ಬುಟ್ಟಿಗಳನ್ನು ಬಳಸುವ ಮೂಲಕ ಗುಡಿಕೈಗಾರಿಕೆಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿದಂತಾಗುತ್ತದೆ.
ಈ ಸಂದರ್ಭದಲ್ಲಿ ಶೀರೂರು ಮಠದ ಪಾರುಪತ್ಯಗಾರ ಶ್ರೀಶ ಭಟ್ ಕಡೆಕಾರು, ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ರಘುಪತಿ ರಾವ್ ಮೊದಲಾದವರಿದ್ದರು.
.jpg)
.jpg)
.jpg)