ಲೋಕಬಂಧು ನ್ಯೂಸ್, ಉಡುಪಿ
ನಾಟಕ ಅಥವಾ ರಂಗಭೂಮಿಯಿಂದ ಸತ್ಯದರ್ಶನ ಸಾಧ್ಯ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಅಭಿಪ್ರಾಯ ವ್ಯಕ್ತಪಡಿಸಿದರು.ರಂಗಭೂಮಿ ಉಡುಪಿ ಆಶ್ರಯದಲ್ಲಿ ಮಹಾತ್ಮ ಗಾಂಧಿ ಸ್ಮಾರಕ (ಎಂಜಿಎಂ) ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯುತ್ತಿರುವ ಐದು ದಿನಗಳವಧಿಯ ರಂಗಭೂಮಿ ರಂಗೋತ್ಸವದಲ್ಲಿ ಬುಧವಾರ ನೀಡಲಾದ ಪ್ರಸಕ್ತ ಸಾಲಿನ 'ರಂಗಭೂಮಿ ಪ್ರಶಸ್ತಿ' ಸ್ವೀಕರಿಸಿ ಮಾತನಾಡಿದರು.
ಅತಿಯಾದ ಯಾಂತ್ರಿಕತೆ ಮತ್ತು ಧಾರ್ಮಿಕತೆಯನ್ನು ಒಟ್ಟಿಗೇ ಹಿಡಿದುಕೊಳ್ಳುವ ಸ್ಥಿತಿಯಲ್ಲಿ ಇಂದು ನಾವಿದ್ದೇವೆ. ಇವೆರಡೂ 'ಕಾಯಕ' ಪ್ರಧಾನವಾದುದು ಎಂಬುದು ಗಮನೀಯ. ಆದರೆ, ಇಂದಿನ ದಿನಗಳಲ್ಲಿ ಕಾಯಕ ದುಃಸ್ಥಿತಿ ತಲುಪಿದೆ. ಕಾಯಕ ಸಂಸ್ಕೃತಿಯಿಂದ ವಿಮುಖವಾದರೆ ಮನುಕುಲದ ನಾಶ ಎಂದು ಎಚ್ಚರಿಸಿದರು.
ಮನರಂಜನೆಯೊಂದಿಗೆ ಭಗವಂತನ ದರ್ಶನದೊಂದಿಗೆ ಮನುಷ್ಯ ಸಂವಹನ ನಾಟಕದ ಮೂಲ ಆಶಯ. ಪಾತ್ರದ ನಕಲಿನಿಂದ ಆರಂಭಗೊಂಡು ತಾದಾತ್ಮ್ಯತೆಗೆ ಕೊಂಡೊಯ್ಯುತ್ತದೆ. ಸಂದರ್ಭ ಅಥವಾ ಪರಿಸ್ಥಿತಿಯನ್ನು ವಾಸ್ತವದಿಂದ ಹೊರಗಿಡುವುದೇ ನಾಟಕ. ರಾಮಕೃಷ್ಣ ಪರಮಹಂಸರಂಥವರಿಗೂ ನಾಟಕ ಸತ್ಯದರ್ಶನ ಮಾಡಿಸಿದೆ ಎಂದು ಉದಾಹರಿಸಿದರು.
ಪ್ರಸನ್ನ ವೈವಿಧ್ಯಮಯ ಸಾಧಕ
ರಂಗಕರ್ಮಿ ಪ್ರಸನ್ನ ಅವರ ಬಗ್ಗೆ ಅಭಿನಂದನ ಭಾಷಣ ಮಾಡಿದ ಸಂಯುಕ್ತ ಕರ್ನಾಟಕ ಸಂಪಾದಕೀಯ ಮಂಡಳಿ ಗೌರವ ಸಲಹೆಗಾರ ಹುಣಸವಾಡಿ ರಾಜನ್, ರಂಗಭೂಮಿಯ ಹಿನ್ನೆಲೆ ಹೊಂದಿಲ್ಲದಿದ್ದರೂ ಸಾಧನೆಯ ಮೂಲಕ ಪ್ರಸನ್ನ ಅವರು ರಂಗಭೂಮಿಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ತಂದಿತ್ತವರು. ಪ್ರಚಾರ, ಪ್ರಸಿದ್ಧಿಯಿಂದ ದೂರವುಳಿಯುವ ಅವರು ತಮ್ಮನ್ನು ಯಾರೊಂದಿಗೂ ಹೋಲಿಸಿಕೊಳ್ಳಲಾಗದವರು ಎಂದರು.
ಪ್ರತಿಭೆ ಸ್ವಯಂ ಅನಾವರಣಗೊಳ್ಳಬೇಕು, ಸ್ಪರ್ಧೆಗಿಳಿಯಬಾರದು ಎಂಬ ಮನೋಭಾವ ಹೊಂದಿರುವ ಪ್ರಸನ್ನ ವೈವಿಧ್ಯಮಯ ಸಾಧಕ, ಬರಹಗಾರ. ರಂಗಕರ್ಮಿ ಪ್ರಸನ್ನ ನಿರ್ದೇಶನದ ಕಾಶಿಯಾತ್ರೆ, ಮೆಕ್ಕಾ ದಾರಿ, ಗೆಲಿಲಿಯೊ, ತಾಯಿ ಮೊದಲಾದ ನಾಟಕಗಳು ಪಿಎಚ್.ಡಿ. ಅಧ್ಯಯನಕ್ಕೆ ಯೋಗ್ಯವಾದವುಗಳು ಎಂದು ರಾಜನ್ ಹೇಳಿದರು.
ವೈಚಾರಿಕ ಗುಲಾಮಗಿರಿಯ ಈ ದಿನಗಳಲ್ಲಿ ಹೋರಾಟದ ಮನೋಭಾವದ ಪ್ರಸನ್ನ ಅವರು ಬೆಂಗಳೂರಿನಲ್ಲಿ ರಾಷ್ಟ್ರೀಯ ರಂಗಶಾಲೆ (ಎನ್.ಎಸ್.ಡಿ.) ಸ್ಥಾಪನೆ, ಖಾದಿ ಚಳುವಳಿ ಇತ್ಯಾದಿಗಳಲ್ಲಿ ತೊಡಗಿದ್ದ ಭಿನ್ನ ವ್ಯಕ್ತಿತ್ವದವರು ಎಂದು ಹುಣಸವಾಡಿ ರಾಜನ್ ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಪ್ರಶಸ್ತಿ ಪ್ರದಾನ ಮಾಡಿ, ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜೊತೆಗೆ ಯುವ ಜನತೆಯನ್ನು ಆಕರ್ಷಿಸುವಂತಾಗಬೇಕು ಎಂದರು.
ಮಾಜಿ ಶಾಸಕ ಕೆ. ರಘುಪತಿ ಭಟ್, ಎಂಜಿಎಂ ಕಾಲೇಜು ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ ಅಭ್ಯಾಗತರಾಗಿದ್ದರು.
ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು ವೇದಿಕೆಯಲ್ಲಿದ್ದರು.
ರಂಗಭೂಮಿ ಉಡುಪಿ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಹ ಕಾರ್ಯದರ್ಶಿ ವಿವೇಕಾನಂದ ಎನ್. ವಂದಿಸಿದರು. ಗೀತಂ ಗಿರೀಶ್ ಸನ್ಮಾನ ಪತ್ರ ವಾಚಿಸಿದರು. ರಂಗ ಕಲಾವಿದೆ ಪೂರ್ಣಿಮಾ ಸುರೇಶ್ ನಿರೂಪಿಸಿದರು.
ಬಳಿಕ ಕೇರಳದ ಲಿಟ್ಲ್ ಅರ್ಥ ಸ್ಕೂಲ್ ಆಫ್ ಥಿಯೇಟರ್ ಕಲಾವಿದರಿಂದ 'ಕುಹೂ' ನಾಟಕ ಪ್ರದರ್ಶನಗೊಂಡಿತು.