ಉಡುಪಿ: ಮಾದಕ ದ್ರವ್ಯ, ಡ್ರಗ್ಸ್ ವಿರುದ್ಧ ಜನಜಾಗೃತಿಗಾಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಭಾನುವಾರ ಉಡುಪಿ ಜಿಲ್ಲಾ ಪೊಲೀಸ್ ಆಯೋಜಿಸಿದ್ದ ಪೊಲೀಸ್ ನಡಿಗೆ (ಮ್ಯಾರಥಾನ್)ಯಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಠಾಣೆಯ ಪಿಎಸ್‌ಐ ನಾಸಿರ್ ಹುಸೇನ್ (59) ಕುಸಿದು ಬಿದ್ದು ಮೃತರಾಗಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ 'ನಮ್ಮ ಪೋಲೀಸ್ ನಮ್ಮ ಹೆಮ್ಮೆ', ಎಲ್ಲರಿಗೂ ಫಿಟ್ನೆಸ್' ಹಾಗೂ 'ಡ್ರಗ್ಸ್ ಫ್ರೀ ಕರ್ನಾಟಕ' ಎಂಬ ಧ್ಯೇಯದೊಂದಿಗೆ ಬೆಳಿಗ್ಗೆ ಆಯೋಜಿಸಿದ್ದ ಮ್ಯಾರಥಾನ್ ಓಟದಲ್ಲಿ ನಾಸಿರ್ ಹುಸೇನ್ ಭಾಗವಹಿಸಿದ್ದರು.
ಕುಸಿದುಬಿದ್ದ ಅವರನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ನಾಸಿರ್ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು.
ನಾಸೀರ್ ಹುಸೇನ್ ಅವರು ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಅಮಾಸೆಬೈಲು, ಕುಂದಾಪುರ, ಬೈಂದೂರು, ಕೊಲ್ಲೂರು ಮತ್ತು ಶಂಕರನಾರಾಯಣ ಪೊಲೀಸ್ ಠಾಣೆಗಳಲ್ಲಿ ಠಾಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಕುಂದಾಪುರ ಗ್ರಾಮಾಂತರ (ಕಂಡೂರು) ಠಾಣೆಯಲ್ಲಿ ಪಿಎಸ್ಐಯಾಗಿದ್ದರು.
ಭಾರತೀಯ ಸೇನೆಯಿಂದ ಪೊಲೀಸ್ ವೃತ್ತಿಗೆ ಸೇರ್ಪಡೆಗೊಂಡಿದ್ದ ಅವರು ಜನಸ್ನೇಹಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಠಾಣೆಗಳಲ್ಲೆಲ್ಲಾ ಜನ ಮೆಚ್ಚುಗೆ ಗಳಿಸಿದ್ದರು.
ಮೃತದೇಹ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸಹಿತ ಹಿರಿಯ ಅಧಿಕಾರಿ, ಸಿಬಂದಿಗಳು ಆಸ್ಪತ್ರೆಗೆ ಭೇಟಿ ನೀಡಿದರು.