ಕಂಬಳ ಹೆಸರಿನಲ್ಲಿ 13 ಎಕರೆ ಭೂಮಿ ಅತಿಕ್ರಮಣ

ಉಡುಪಿ: ಮಣಿಪಾಲ ಸಮೀಪದ 80 ಬಡಗುಬೆಟ್ಟಿನಲ್ಲಿ ಸುಮಾರು 13 ಎಕರೆ ಜಾಗವನ್ನು ಅತಿಕ್ರಮಣ ಮಾಡಿ ಕಂಬಳಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಬಿಜೆಪಿಯವರ ಅಕ್ರಮಗಳನ್ನು ಮುಚ್ಚಿ ಹಾಕಲು ನನ್ನ ವಿರುದ್ಧ ಅಪವಾದ ಹೊರಿಸಲಾಗುತ್ತಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆಕ್ರೋಶ ವ್ಯಕ್ತಪಡಿಸಿದರು.ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಅನುಭವದ ಕೊರತೆ ಇದೆ. ನನ್ನ ವಿರುದ್ದ ನಿರಂತರ ಅಪವಾದ ಹೊರಿಸಲಾಗುತ್ತಿದೆ. ಜಾನಪದ ಕ್ರೀಡೆ ಕಂಬಳ ಆಯೋಜನೆ ಬಗ್ಗೆ ನನ್ನ ವಿರೋಧ ಇಲ್ಲ. ಆದರೆ, ಬಡಗುಬೆಟ್ಟಿನಲ್ಲಿ ಕಂಬಳಕ್ಕೆ ಸೂಚಿಸಿರುವ ಜಾಗ ಇನ್ನೂ ಕಂಬಳ ಸಮಿತಿಗೆ ಹಸ್ತಾಂತರ ಆಗಿಲ್ಲ. ಅರಣ್ಯ ಇಲಾಖೆಯ ಜಾಗ ಅತಿಕ್ರಮಿಸಿರುವ ಬಗ್ಗೆಯೂ ಪ್ರಕರಣ ದಾಖಲಾಗಿದೆ. ಕಂಬಳ ನಡೆಸಲು ಅಲ್ಲಿ ಕೆಲವೊಂದು ಷರತುಗಳಿವೆ. ಆದರೆ ಅದನ್ನು ಉಲ್ಲಂಘಿಸಿ 13 ಎಕರೆ ಜಾಗ ಅತಿಕ್ರಮಣ ಮಾಡಲಾಗಿದೆ.
ಆ ಭಾಗದಲ್ಲಿ ಅನೇಕ ವರ್ಷಗಳಿಂದ ವಾಸವಾಗಿರುವ ರೈತರಿಗೆ ಸೂಕ್ತ ಹಕ್ಕುಪತ್ರ ಸಿಕ್ಕಿಲ್ಲ. ಅವರು ಸುಮಾರು 40 ವರ್ಷದಿಂದ ಬಡಗುಬೆಟ್ಟು ಪ್ರದೇಶದಲ್ಲಿ ಕೃಷಿ ಮಾಡುತ್ತಿದ್ದಾರೆ. ಆದರೆ, ಸರ್ವಾಧಿಕಾರಿ ಧೋರಣೆಯಿಂದ ಆ ಸ್ಥಳವನ್ಬು ಅತಿಕ್ರಮಣ ಮಾಡಲಾಗಿದೆ ಎಂದು ಸೊರಕೆ ಆರೋಪಿಸಿದರು.
ಜಿಲ್ಲಾಡಳಿತ ಕಂಬಳ ಸಮಿತಿ ರಚಿಸಿಲ್ಲ.  ಜಾಗ ಹಸ್ತಾಂತರಿಸಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ತಹಶೀಲ್ದಾ‌ರ್ ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದಿರುವುದಾಗಿ ಸೊರಕೆ ಹೇಳಿದರು.
ಜಿಲ್ಲಾಡಳಿತದ ಅನುಮತಿ ಪಡೆಯದೇ ಗುದ್ದಲಿ ಪೂಜೆ ನಡೆಸಲು ನಾನು ಹೇಳಿಲ್ಲ. ಬಿಜೆಪಿ ಮುಖಂಡರು ಸೇರಿಸಿ ಸಭೆ ನಡೆಸಿ, ಕಾರ್ಯಕ್ರಮ ಆಯೋಜಿಸಿ ವಿವಾದವುಂಟುಮಾಡಿ ಇದೀಗ ನನ್ನ ಮೇಲೆ ಆರೋಪ ಹೊರಿಸುವುದು ಎಬ್ಬಿಸಿ ನನ್ನ ಮೇಲೆ ಆರೋಪ ಹೊರಿಸುವುದು ಸರಿಯಲ್ಲ ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಎಲ್ಲವನ್ನೂ ವ್ಯಾಪಾರಿ ದೃಷ್ಟಿಯಿಂದ ನೋಡುವುದನ್ನು ನಿಲ್ಲಿಸಲಿ ಎಂದು ಕಿವಿಮಾತು ಹೇಳಿದ ಸೊರಕೆ, ಬಡಗುಬೆಟ್ಟಿನಲ್ಲಿ ಕಂಬಳ ನಡೆಸಲು ಸಮಸ್ಯೆ ಇದೆ ಎಂದು ಜಿಲ್ಲಾಡಳಿತವೇ ರದ್ದುಗೊಳಿಸಿತ್ತು ಎಂದರು.
ಕಂಬಳಕ್ಕೆ ನನ್ನ ವಿರೋಧವಿಲ್ಲ. ಆ ಭಾಗದ ಜನರ ಸಮಸ್ಯೆ ಪರಿಹರಿಸಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಂಬಳ ನಡೆಸಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್ ಕುಮಾ‌ರ್ ಕೊಡವೂರು, ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಸಂತೋಷ್‌ ಕುಲಾಲ್, ಸಂತೋಷ್ ಕುಮಾರ್ ಭೈರಂಪಳ್ಳಿ ಮತ್ತು ಇಸ್ಮಾಯಿಲ್ ಉಪಸ್ಥಿತರಿದ್ದರು.