ಲೋಕಬಂಧು ನ್ಯೂಸ್, ಉಡುಪಿ
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಬೈಂದೂರು ನ್ಯಾಯಾಲಯಗಳಲ್ಲಿ ಮಾ.14ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಂಡಿದ್ದು, ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ 35,263 ಪ್ರಕರಣಗಳ ಪೈಕಿ 4,397 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ಹೇಳಿದರು.ಉಡುಪಿ ನ್ಯಾಯಾಲಯ ಸಂಕೀರ್ಣದ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಉಡುಪಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಬಾಕಿ ಉಳಿದ ಪ್ರಕರಣಗಳನ್ನು ರಾಜೀ ಪ್ರಕ್ರಿಯೆ ಮೂಲಕ ವಿಲೇವಾರಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಚೆಕ್ ಅಮಾನ್ಯ ಪ್ರಕರಣ, ಬ್ಯಾಂಕ್ ಸಾಲ ವಸೂಲಾತಿ, ಮೋಟಾರ್ ವಾಹನ ಅಪಘಾತ ಪ್ರಕರಣಗಳಿಗೆ ಸಂಬಂಧಿಸಿದ ಪ್ರಕರಣಗಳಿಗೆ ಸಂಬಂಧಿಸಿ ಈಗಾಗಲೇ ಬ್ಯಾಂಕ್, ವಿಮೆ, ಇನ್ಶೂರೆನ್ಸ್ ಕಂಪನಿಗಳ ಮೂಲಕ ಮಾತುಕತೆ ನಡೆಸಲಾಗಿದೆ. ಆದರೆ, ಉಡುಪಿ ಕಾರ್ಕಳದಲ್ಲಿ ಈ ಬಗ್ಗೆ ಸಂಬಂಧಪಟ್ಟ ಕಂಪನಿಗಳಿಂದ ಸೂಕ್ತ ಪ್ರತ್ಯುತ್ತರ ಬರುತ್ತಿಲ್ಲ. ಹಾಗಾಗಿ ಬಾರ್ ಅಸೋಸಿಯೇಶನ್ ಗಮನಕ್ಕೆ ತರಲಾಗಿದೆ ಎಂದರು.
ಕಳೆದ ಡಿಸೆಂಬರ್ ನಲ್ಲಿ 4,341 ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದು ಅದರಲ್ಲಿ 3,729 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅಲ್ಲದೇ ಪರಿಹಾರ ಮೊತ್ತ 17.31 ಕೋಟಿ ಪರಿಹಾರವನ್ನೂ ವಿತರಿಸಲಾಗಿದೆ ಎಂದರು
ಕಳೆದ ಡಿಸೆಂಬರ್ ನಲ್ಲಿ 4,341 ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದು, ಅದರಲ್ಲಿ 3,729 ಪ್ರಕರಣ ಇತ್ಯರ್ಥಪಡಿಸಿ 17.31 ಕೋಟಿ ಪರಿಹಾರ ವಿತರಿಸಲಾಗಿದೆ ಎಂದರು.
ನ್ಯಾಯಾಲಯಗಳಲ್ಲಿ ಉಭಯ ಪಕ್ಷಗಾರರು ರಾಜೀ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಪ್ರಕರಣದ ಇತ್ಯರ್ಥಕ್ಕೆ ಉಭಯ ಕಕ್ಷಿದಾರರ ಉಪಸ್ಥಿತಿ ಕಡ್ಡಾಯವಾಗಿದೆ. ಉಭಯತ್ರರಿಗೆ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನಗೊಳ್ಳುವುದರಿಂದ ಸೌಹಾರ್ದತೆ ಉಳಿಯಲು ಸಾಧ್ಯವಾಗುತ್ತದೆ ಎಂದರು.
ಉಡುಪಿಯ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಉಪಸ್ಥಿತರಿದ್ದರು.