ಮಾ.4-8: ರಂಗಭೂಮಿ ರಂಗೋತ್ಸವ

ಉಡುಪಿ: ರಂಗಭೂಮಿ ಉಡುಪಿ ಆಶ್ರಯದಲ್ಲಿ‌ ಮಾರ್ಚ್ ತಿಂಗಳ 4ರಿಂದ 8ರ ವರೆಗೆ ರಂಗಭೂಮಿ ರಂಗೋತ್ಸವ ನಡೆಯಲಿದೆ ಎಂದು ಸಂಸ್ಥೆ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ಎಂಜಿಎಂ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮವನ್ನು ಮಾ.4ರಂದು ಸಂಜೆ 6 ಗಂಟೆಗೆ ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ. ಶಂಕರ್ ಉದ್ಘಾಟಿಸುವರು.


ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದು, ರಂಗಕರ್ಮಿ ಪ್ರಸನ್ನ ಅವರಿಗೆ 20 ಸಾವಿರ ರೂ. ನಗದು ಸಹಿತ ರಂಗಭೂಮಿ ಪ್ರಶಸ್ತಿ ನೀಡಲಾಗುವುದು. ಸಂಯುಕ್ತ ಕರ್ನಾಟಕ ಸಂಪಾದಕೀಯ ಮಂಡಳಿ ಗೌರವ ಸಲಹೆಗಾರ ಹುಣಸವಾಡಿ ರಾಜನ್, ಮಾಜಿ ಶಾಸಕ ರಘುಪತಿ ಭಟ್, ಎಂಜಿಎಂ ಕಾಲೇಜು ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ ಅಭ್ಯಾಗತರಾಗಿ ಆಗಮಿಸುವರು. ಕಾರ್ಯಕ್ರಮದ ತರುವಾಯ ಕೇರಳದ ಲಿಟ್ಲ್ ಅರ್ಥ ಸ್ಕೂಲ್ ಆಫ್ ಥಿಯೇಟರ್ ಕಲಾವಿದರಿಂದ `ಕುಹೂ' ನಾಟಕ ಪ್ರದರ್ಶನ ನಡೆಯಲಿದೆ ಎಂದು ಡಾ.ತಲ್ಲೂರು ವಿವರಿಸಿದರು.


ಮಾ.5ರಂದು ಸಂಜೆ 6 ಗಂಟೆಗೆ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಲಿದ್ದು, ಪ್ರಥಮ ಬಹುಮಾನ ಪಡೆದ ಸುಮನಸಾ ತಂಡದಿಂದ `ಈದಿ' ನಾಟಕ ಪ್ರದರ್ಶನಗೊಳ್ಳಲಿದೆ.


ಮಾ.6ರಂದು ರಂಗಭೂಮಿ ಉಡುಪಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಹಾಗೂ ಕರ್ನಾಟಕ ಜಾನಪದ ಪರಿಷತ್ ಸಹಯೋಗದೊಂದಿಗೆ ದಕ್ಷಿಣ ಭಾರತ ರಾಜ್ಯಗಳ ಜಾನಪದ ಉತ್ಸವ ನಡೆಯಲಿದ್ದು, ಮಾ.8ರಂದು ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ.ಟಿ. ಶ್ಯಾಮ್ ಭಟ್ ಅವರಿಗೆ ಜಾನಪದ ಪ್ರಶಸ್ತಿ ನೀಡಲಾಗುವುದು ಎಂದು ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ ತಿಳಿಸಿದರು.


ರಂಗಭೂಮಿ ಉಡುಪಿ ಉಪಾಧ್ಯಕ್ಷ ಎನ್. ರಾಜಗೋಪಾಲ ಬಲ್ಲಾಳ್, ಕೋಶಾಧಿಕಾರಿ ಭೋಜ ಯು. ಹಾಗೂ ಕಾರ್ಯಕಾರಿ ಸಮಿತಿಯ ಸುಬ್ರಹ್ಮಣ್ಯ ಶೇರೆಗಾರ್ ಉಪಸ್ಥಿತರಿದ್ದರು.