ಲೋಕಬಂಧು ನ್ಯೂಸ್, ಉಡುಪಿ
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ವಿಶೇಷವಾಗಿ ಇರಾನ್ ಹಾಗೂ ನೆರೆಯ ರಾಷ್ಟ್ರಗಳನ್ನೊಳಗೊಂಡಂತೆ ಇತ್ತೀಚಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ದೇಶದ ಕ್ರೈಸ್ತ ಸಮುದಾಯ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲು ಬಿಷಪರ ಮಂಡಳಿ ಕರೆ ನೀಡಿದ್ದು, ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದಲ್ಲಿ ಮಾರ್ಚ್ 8ರಂದು ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಕ್ರೈಸ್ತ ಸಮುದಾಯಕ್ಕೆ ಮನವಿ ಮಾಡಿದ್ದಾರೆ.ಯುದ್ಧ ಮತ್ತು ಅಸ್ಥಿರತೆಯಿಂದ ಉಂಟಾಗುತ್ತಿರುವ ದುಃಖ ಮಾನವ ಕುಟುಂಬಕ್ಕೆ ತೀವ್ರ ಘಾಸಿ ಉಂಟುಮಾಡುತ್ತಿದೆ. ಮಧ್ಯಪ್ರಾಚ್ಯದ ಹಲವು ದೇಶಗಳಲ್ಲಿ ಕೆಲಸ ಮಾಡುತ್ತಿರುವ ಮತ್ತು ವಾಸಿಸುತ್ತಿರುವ ಭಾರತದ ಸಹೋದರ-ಸಹೋದರಿಯರ ಸುರಕ್ಷತೆ ಕುರಿತು ಕ್ರೈಸ್ತ ಧರ್ಮಸಭೆ ವಿಶೇಷ ಕಾಳಜಿ ವ್ಯಕ್ತಪಡಿಸಿದ್ದು, ದೂರದ ದೇಶಗಳಲ್ಲಿ ದುಡಿದು ತಮ್ಮ ಕುಟುಂಬಗಳನ್ನು ಪೋಷಿಸುತ್ತಿರುವ ಅವರು ಧರ್ಮಸಭೆ ಮತ್ತು ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ.
ಈ ಅನಿಶ್ಚಿತ ಸಮಯದಲ್ಲಿ ಅವರ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣಕ್ಕಾಗಿ ದೇವರ ಕೃಪೆಗೆ ಮನವಿ ಮಾಡಲಾಗಿದೆ.
ಮಾ.8ನ್ನು 'ಶಾಂತಿಗಾಗಿ ಪ್ರಾರ್ಥನಾ ದಿನ'ವಾಗಿ ಆಚರಿಸಲು ನಿರ್ಧರಿಸಿದ್ದು ಪವಿತ್ರ ಬಲಿಪೂಜೆ ಆಚರಣೆ ವೇಳೆ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಲು ಮನವಿ ಮಾಡಲಾಗಿದೆ.
ಹಿಂಸಾಚಾರ ಕೊನೆಗೊಂಡು ನಿರಪರಾಧಿಗಳ ರಕ್ಷಣೆ ಹಾಗೂ ಜಗತ್ತಿನ ನಾಯಕರು ತಿಳಿವಳಿಕೆ ಮತ್ತು ಸಂಯಮದಿಂದ ನಡೆದುಕೊಳ್ಳುವಂತೆ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಐಸಾಕ್ ಲೋಬೊ ತಿಳಿಸಿದ್ದಾರೆ.
ಇದೇ ವೇಳೆ, ಮಾ. 8ರಿಂದ 14ರ ವರೆಗೆ ಪ್ರತಿದಿನವೂ ಶಾಂತಿಗಾಗಿ ವಿಶೇಷ ಪವಿತ್ರ ಜಪ ಹಾಗೂ ಪ್ರಾರ್ಥನೆ ಸಲ್ಲಿಸುವಂತೆ ಮನವಿ ಮಾಡಿದ್ದು, ಮಾ. 13ರಂದು ಉಪವಾಸ ಮತ್ತು ಪ್ರಾರ್ಥನಾ ದಿನವಾಗಿ ಆಚರಿಸಿ, ವಿಶ್ವಶಾಂತಿ ಹಾಗೂ ಹಿಂಸಾಚಾರದಿಂದ ಬಳಲುತ್ತಿರುವ ಎಲ್ಲರ ಸುರಕ್ಷತೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಂತೆ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂಡೆನಿಸ್ ಡೆಸಾ ತಿಳಿಸಿದ್ದಾರೆ.