ಉಡುಪಿ | ಲೋಕಬಂಧು ನ್ಯೂಸ್
ಉಡುಪಿ ನಗರ ಠಾಣೆಯ ಸುಮಾರು 10 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ, ಕುಂದಾಪುರದ ಕುಂಭಾಶಿ ನಿವಾಸಿ ವಿಘ್ನೇಶ್ವರ ಐತಾಳ ಎಂಬಾತನನ್ನು ಉಡುಪಿ ಪೊಲೀಸರು ಮಾರ್ಚ್ 5ರಂದು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಆತನ ವಿರುದ್ಧ ಪ್ರಕರಣ ದಾಖಲಾದ ಬಳಿಕ 2011ರಿಂದ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಸುಮಾರು 10 ಪ್ರಕರಣಗಳ ದೋಷರೋಪಣಾಪಟ್ಟಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಆರೋಪಿ ವಿಘ್ನೇಶ್ವರ ಐತಾಳ ನ್ಯಾಯಾಲಯಕ್ಕೆ ಹಾಜರಾಗದೇ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಸುಮಾರು 10ಕ್ಕಿಂತಲೂ ಹೆಚ್ಚು ಬಾರಿ ವಾರೆಂಟ್ ಹೊರಡಿಸಲಾಗಿದ್ದು, ನ್ಯಾಯಾಲಯ ಆತನ ವಿರುದ್ಧ 'ತಲೆ ಮರೆಸಿಕೊಂಡ ಆರೋಪಿ' ಎಂದು ಘೋಷಿಸಿತ್ತು.
ಉಡುಪಿ ನಗರ ಪೊಲೀಸ್ ಠಾಣಾ ಪ್ರಭಾರ ನಿರೀಕ್ಷಕ ಮಹೇಶ ಪ್ರಸಾದ್ ಮಾರ್ಗದರ್ಶನದಲ್ಲಿ ಪಿಎಸ್ಐ ಭರತೇಶ ಕಂಕಣವಾಡಿ, ಎಚ್.ಸಿ. ಪ್ರಸನ್ನ, ಸಿಎಚ್.ಸಿ. ರಮೇಶ ಮತ್ತು ಪಿಸಿ ಆನಂದ ಅವರ ತಂಡ ಬೆಂಗಳೂರಿನ ತಲಘಟ್ಟಪುರದಲ್ಲಿ ಪತ್ತೆಹಚ್ಚಿ, ವಶಕ್ಕೆ ಪಡೆದುಕೊಂಡು ಶುಕ್ರವಾರ ನ್ಯಾಯಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
