ಲೋಕಬಂಧು ನ್ಯೂಸ್, ಉಡುಪಿ
ಮಲ್ಪೆ ಬಂದರಿನ ಮೀನು ಕಾರ್ಮಿಕ ಶೇಖ್ ಅಯೂಬ್ ಮೇಲಿನ ಹಲ್ಲೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಸಿಐಟಿಯು, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಸಹಬಾಳ್ವೆ ಹಾಗೂ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಪ್ರತಿಭಟನೆ ನಡೆಯಿತು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಸಹಬಾಳ್ವೆ ಸಂಘಟನೆ ಸಂಚಾಲಕ ಇದ್ರಿಸ್ ಹೂಡೆ, ಹಲ್ಲೆಗೊಳಗಾದ ಕಾರ್ಮಿಕ ಶೇಖ್ ಅಯೂಬ್ ಮೀನು ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಒಂದುವೇಳೆ ಆತ ತಪ್ಪು ಮಾಡಿದ್ದರೆ ಅದನ್ನು ಪ್ರಶ್ನಿಸಲು ಪೊಲೀಸ್ ಇಲಾಖೆ ಇದೆ. ಏಕಾಏಕಿ ಹಲ್ಲೆ ನಡೆಸಲು ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ಮಲ್ಪೆ ಬಂದರಿನಲ್ಲಿ ರಾಜಕೀಯ ಪ್ರಭಾವಿಗಳು ಕಾರ್ಮಿಕರ ಮೇಲೆ ನಡೆಸುತ್ತಿರುವ ದೌರ್ಜನ್ಯಗಳಿಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು. ಕೇವಲ ರಾಜಿ ಪಂಚಾಯಿತಿ ಮೂಲಕ ತಿಪ್ಪೆ ಸಾರಿಸುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.
ಸಿಐಟಿಯು ಪ್ರಧಾನ ಸಂಚಾಲಕ ಫಣಿರಾಜ್ ಮಾತನಾಡಿ, ಮಲ್ಪೆ ಬಂದರಿನಲ್ಲಿ ಕಾರ್ಮಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ರಾಜಕೀಯ ಸ್ವರೂಪವಿದೆ. ಇದು ಹೀಗೆಯೇ ಮುಂದುವರಿದರೆ ಸಮಾಜಕ್ಕೆ ಮಾರಕ ಎಂದು ಕಿಡಿಕಾರಿದರು.
ಮಲ್ಪೆ ಬಂದರಿನಲ್ಲಿ ಜಾತಿ-ಮತದ ಹೆಸರಿನಲ್ಲಿ ಕಾರ್ಮಿಕರನ್ನು ಛೂ ಬಿಡಲಾಗುತ್ತಿದ್ದು, ಸರ್ಕಾರ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.