ಲೋಕಬಂಧು ನ್ಯೂಸ್ | ಉಡುಪಿ, ಮಾ.31
ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಸಚಿವಾಲಯ ಪ್ರಕಟಿಸಿದ 2025ನೇ ಸಾಲಿನ ದೀನದಯಾಳ್ ಉಪಾಧ್ಯಾಯ ಪಂಚಾಯತ್ ಸತತ್ ಅಭಿವೃದ್ಧಿ ಪುರಸ್ಕಾರಕ್ಕೆ ರಾಜ್ಯಗಳಿಗೆ ನೀಡುವ ಒಟ್ಟು 6 ವಿಭಾಗಗಳ ಪೈಕಿ 5 ವಿಭಾಗಗಳಿಗೆ ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತ್'ಗಳು ಆಯ್ಕೆಯಾಗಿದ್ದು, ಅದಕ್ಕಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಂತೋಷ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯತ್-ಬಡತನ ನಿರ್ಮೂಲನೆ ವಿಭಾಗ, ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮ ಪಂಚಾಯತ್- ಆರೋಗ್ಯ ವಿಭಾಗ, ಕಾರ್ಕಳ ತಾಲೂಕಿನ ಸಾಣೂರು ಗ್ರಾ.ಪಂ.- ಸ್ವಯಂ ಮೂಲಸೌಕರ್ಯ ಅಭಿವೃದ್ಧಿ ವಿಭಾಗ, ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾ.ಪಂ- ಜಲ ಸಮೃದ್ಧಿ ವಿಭಾಗ ಮತ್ತು ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾ.ಪಂ.- ಸಾಮಾಜಿಕ ನ್ಯಾಯ ವಿಭಾಗದಲ್ಲಿ ಪ್ರಶಸ್ತಿಗೆ ಪಾತ್ರವಾಗಿವೆ.
ಉಡುಪಿ ಜಿಲ್ಲೆಯ 5 ಗ್ರಾಮ ಪಂಚಾಯತ್'ಗಳು ಪ್ರಶಸ್ತಿಗೆ ಆಯ್ಕೆಯಾಗಿರುವುದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಉತ್ತಮ ಆಡಳಿತಕ್ಕೆ ಸಾಕ್ಷಿ ಎಂದು ಸಂಸದ ಕೋಟ ತಿಳಿಸಿದ್ದಾರೆ.
ಈ ಸಾಧನೆಗಾಗಿ ಸಂಬಂಧಿಸಿದ ಪಂಚಾಯತ್'ಗಳ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಮತ್ತು ಗ್ರಾಮಸ್ಥರನ್ನು ಸಂಸದರು ಅಭಿನಂದಿಸಿ, ಇಂಥ ಸಾಧನೆ ಇತರ ಪಂಚಾಯತ್'ಗಳಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದ್ದಾರೆ.
