ಮಲಬಾರ್ ವಿಶ್ವ ರಂಗ ಪುರಸ್ಕಾರ ಪ್ರದಾನ

ಲೋಕಬಂಧು ನ್ಯೂಸ್ | ಉಡುಪಿ, ಮಾ.31
ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಆಶ್ರಯದಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನೀಡುವ ಪ್ರಸಕ್ತ ಸಾಲಿನ ಮಲಬಾರ್ ವಿಶ್ವ ರಂಗ ಪುರಸ್ಕಾರವನ್ನು ರಾಜ್ಯ ಹಾಗೂ ಹೊರ ರಾಜ್ಯಗಳ ಐವರು ರಂಗ ಕಲಾವಿದರಿಗೆ ಪ್ರದಾನ ಮಾಡಲಾಯಿತು.
ಹಿರಿಯ ರಂಗಕರ್ಮಿಗಳಾದ ಶ್ರೀಪತಿ ಮಂಜನಬೈಲು ಬೆಂಗಳೂರು, ಗೀತಾ ಸುರತ್ಕಲ್, ಎಸ್. ನಿತ್ಯಾನಂದ ಪೈ ಕಾರ್ಕಳ, ಅವಿನಾಶ್ ಕಾಮತ್ ಮುಂಬೈ ಹಾಗೂ ರಾಮ ಶೆಟ್ಟಿ ಹಾರಾಡಿ ಅವರಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರದಾನಿಸಿದರು.


ಬಳಿಕ ಮಾತನಾಡಿದ ಅವರು ಪ್ರತಿಯೊಂದು ನಾಟಕ ಸಮಾಜಕ್ಕೆ ಹೊಸ ಆಲೋಚನೆ ನೀಡುವ ಬೆಳಕಿನ ಕಿರಣವಾಗಿದೆ. ಕಲಾವಿದರು ಆ ಪಾತ್ರಕ್ಕೆ ಶಕ್ತಿ ತುಂಬುವ ಮೂಲಕ ಪ್ರೇಕ್ಷಕರಿಗೆ ಹೊಸ ಭರವಸೆ ಮತ್ತು ಸಂದೇಶ ನೀಡುವ ಕಾರ್ಯ ಮಾಡುತ್ತಾರೆ.


ಉಡುಪಿ ಜಿಲ್ಲೆ ಸಾಂಸ್ಕೃತಿಕ ಮತ್ತು ಸಾಹಿತ್ಯದ ಚಿಂತನೆ ಬೆಸೆಯುವ ಜಿಲ್ಲೆಯಾಗಿದ್ದು, ಕಳೆದ ಏಳು ವರ್ಷಗಳಿಂದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ನಡೆಸುತ್ತಿರುವ ಕಾರ್ಯಕ್ರಮಗಳು ಮಾದರಿ ಎಂದರು.


ಅಭ್ಯಾಗತರಾಗಿದ್ದ ಶಂಕರ್ ಸಮೂಹ ಸಂಸ್ಥೆ ಆಡಳಿತ ನಿರ್ದೇಶಕಿ ಸುಗುಣ ಸುವರ್ಣ, ರಂಗಭೂಮಿ ಸಮಾಜವನ್ನು ಸರಿದಾರಿಗೆ ತರಲು ಸಹಕಾರಿ. ಕಲಾವಿದರಿಗೆ ಗೌರವ ನೀಡಿದಾಗ ಅವರಿಗೆ ಮತ್ತಷ್ಟು ಸೇವೆ ಮಾಡಲು ಉತ್ಸಾಹ ಮೂಡುತ್ತದೆ ಎಂದರು.


ಸರಬರಾಜು ನಿರ್ವಹಣೆ ಪಾವತಿ ಮತ್ತು ಗುರುತಿನ ಪರಿಹಾರಗಳು ಮಣಿಪಾಲ ಉಪಾಧ್ಯಕ್ಷ ನವೀನ್ ಕುಮಾರ್ ಶುಭ ಹಾರೈಸಿದರು.


ವೇದಿಕೆಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಮಲಬಾರ್ ಗೋಲ್ಡ್ ಶಾಖಾ ವ್ಯವಸ್ಥಾಪಕ ಹಫೀಸ್ ರೆಹಮಾನ್, ಮಲಬಾರ್ ವಿಶ್ವ ರಂಗ ಪುರಸ್ಕಾರ ಸಮಿತಿ ಸಂಚಾಲಕ ರಾಜೇಶ್ ಭಟ್ ಪಣಿಯಾಡಿ ಇದ್ದರು.


ಈ ಸಂದರ್ಭದಲ್ಲಿ ರಂಗ ನಟ ವಿಘ್ನೇಶ್ ಹಿರಿಯಡಕ ಅವರನ್ನು ಗೌರವಿಸಲಾಯಿತು.


ಡಾ.ಭಾರ್ಗವಿ ಐತಾಳ, ರಂಜನಿ ವಸಂತ್, ವಿದ್ಯಾಸರಸ್ವತಿ, ಪೂರ್ಣಿಮಾ ಜನಾರ್ದನ್, ವಿದ್ಯಾ ಶ್ಯಾಮಸುಂದರ್, ಪರಿಚಯಿಸಿದರು.


ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ ಪ್ರಸ್ತಾವನೆಗೈದರು. ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿ, ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು. ಜನಾರ್ದನ ಕೊಡವೂರು ವಂದಿಸಿದರು.