ನನ್ನ ವಿರುದ್ಧದ ಆರೋಪಗಳೆಲ್ಲ ಸುಳ್ಳು

ಲೋಕಬಂಧು ನ್ಯೂಸ್ ಉಡುಪಿ, ಏ.2
ನೆಲ್ಯಾಡಿ ಮೂಲದ ಉದ್ಯಮಿ ಸುದೀಪ್ ರೈ  ಆತ್ಮಹತ್ಯೆ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆಯುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣ ಕುರಿತಂತೆ ದಿನೇ ದಿನೇ ಹೊಸ ಬೆಳವಣಿಗೆಗಳು ಬೆಳಕಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸುದೀಪ್ ರೈ ಪತ್ನಿ ಸೌಮ್ಯ ಶೆಟ್ಟಿ ಗುರುವಾರ ಮಾಧ್ಯಮಗಳ ಮುಂದೆ ಹಾಜರಾಗಿ ತನ್ನ ವಿರುದ್ಧ ಕೇಳಿಬರುತ್ತಿರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ.ಸುದೀಪ್ ರೈ ಸಾವಿನ ನಂತರ ಅವರ ತಂದೆ ಕೆಲವು ಗಂಭೀರ ಆರೋಪ ಮಾಡಿರುವುದಾಗಿ ತಿಳಿದುಬಂದಿದ್ದು, ಅದಕ್ಕೆ ಪ್ರತಿಕ್ರಿಯಿಸಿದ ಸೌಮ್ಯ ಶೆಟ್ಟಿ , 'ನನ್ನ ವಿರುದ್ಧ ಕೇಳಿಬರುತ್ತಿರುವ ಹನಿ ಟ್ರ್ಯಾಪ್ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ನಿರಾಧಾರ. ಅವು ನನ್ನ ವ್ಯಕ್ತಿತ್ವ ಹಾನಿ ಮಾಡಲು ಉದ್ದೇಶಿತವಾಗಿ ಮಾಡಲಾಗುತ್ತಿದೆ' ಎಂದರು.


ಸುದೀಪ್ ಅವರು ತನ್ನ ತಂದೆಯ ಮನೆಗೆ ತೆರಳಿದ್ದ ಸಮಯದಲ್ಲೇ ಈ ದುರ್ಘಟನೆ ಸಂಭವಿಸಿದೆ. ಈ ವಿಚಾರದಲ್ಲಿ ನನ್ನನ್ನು ಥಳಕು ಹಾಕುವುದು ನ್ಯಾಯಸಮ್ಮತವಲ್ಲ. ಘಟನೆಗೆ ಸಂಬಂಧಿಸಿದ ಎಲ್ಲಾ ಅಂಶಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದವರು ಆಗ್ರಹಿಸಿದರು.


ಇದೇ ವೇಳೆ ಪ್ರಕರಣದಲ್ಲಿ ಉಲ್ಲೇಖವಾಗುತ್ತಿರುವ ವೇಣುಗೋಪಾಲ್‌ ಶೆಟ್ಟಿ ಕುರಿತು ಮಾತನಾಡಿದ ಸೌಮ್ಯ ಶೆಟ್ಟಿ, 'ವೇಣುಗೋಪಾಲ್ ಶೆಟ್ಟಿ ನನ್ನ ವಿರುದ್ಧ ಪೂರ್ವಾಗ್ರಹದಿಂದ ಆರೋಪ ಮಾಡುತ್ತಿದ್ದಾರೆ. ಅವರ ಜೊತೆ ಮದುವೆಯಾಗುವ ವಿಚಾರವನ್ನು ನಾನು ನಿರಾಕರಿಸಿದ್ದೆ. ಕಾರಣ, ಅವರು ಬೇರೆ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ ವಿಚಾರ ನನಗೆ ತಿಳಿದಿತ್ತು.



ಆ ಹಿನ್ನೆಲೆಯಲ್ಲೇ ಅವರು ವೈಯಕ್ತಿಕ ದ್ವೇಷದಿಂದ ಈ ಪ್ರಕರಣವನ್ನು ಬಳಸಿಕೊಂಡು ನನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುತ್ತಿದ್ದಾರೆ. ನನ್ನ ಹೆಸರು ಕೆಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸೌಮ್ಯ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.


ಈ ಸಂಬಂಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿರುವುದಾಗಿ ಸೌಮ್ಯ ಶೆಟ್ಟಿ ತಿಳಿಸಿದ್ದಾರೆ. ಜೊತೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಸಂಪೂರ್ಣ ವಿಷಯ ವಿವರಿಸಿ, ನ್ಯಾಯಯುತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವುದಾಗಿ ಹೇಳಿದರು.


ನನ್ನ ಮೇಲೆ ಮಾಡಲಾಗುತ್ತಿರುವ ಆರೋಪಗಳು ಸಂಪೂರ್ಣ ಸುಳ್ಳು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯ ಬಹಿರಂಗಪಡಿಸಬೇಕು. ನನಗೆ ನ್ಯಾಯ ದೊರಕಬೇಕು ಎಂದು ಸೌಮ್ಯ ಶೆಟ್ಟಿ ಒತ್ತಾಯಿಸಿದರು.