ಲೋಕಬಂಧು ನ್ಯೂಸ್ | ಉಡುಪಿ, ಮಾ.31
ಯುವಜನತೆ ಯೌವನದ ಆಕರ್ಷಣೆಗಳಿಗೆ ಬಲಿಯಾಗದೇ ಸಾಹಸ ಧೈರ್ಯ ಶಕ್ತಿ ಶ್ರದ್ಧೆ ಮತ್ತು ವಿಧೇಯತೆಯಿಂದ ಮುನ್ನುಗ್ಗಿ ತಮ್ಮ ಕರ್ತವ್ಯ ಪೂರೈಸಿದರೆ ವಿಶ್ವಕಲ್ಯಾಣ ಸಾಧ್ಯ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಶ್ರೀ ವೀರೇಶಾನಂದ ಸರಸ್ವತಿ ಹೇಳಿದರು.
ಎಂ.ಜಿ.ಎಂ. ಕಾಲೇಜು, ಎಂ.ಜಿ.ಎಂ. ಸಂಧ್ಯಾ ಕಾಲೇಜು, ಎಂ.ಜಿ.ಎಂ. ಮತ್ತು ಪ.ಪೂ. ಕಾಲೇಜು ಆಶ್ರಯದಲ್ಲಿ ವಿವೇಕಾನಂದ ಚಿಂತನ ವೇದಿಕೆ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ `ಯುವಜನತೆಯ ಮುಂದಿರುವ ಸವಾಲುಗಳು- ಸರಿಯುತ್ತರ' ವಿಚಾರವಾಗಿ ವಿಶೇಷ ಪ್ರವಚನ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಶಿಕ್ಷಣ, ಅಧ್ಯಯನಶೀಲತೆ ಹಾಗೂ ನಿತ್ಯವೂ ಹಿರಿಯರಿಗೆ ಗೌರವ ಸಲ್ಲಿಸುವ ಮೂಲಕ ನಾವು ಅರಿವನ್ನು ಪಡೆದು ವಿವೇಕಿಗಳಾಗಬಹುದು. ಯುವಜನತೆ ಮುಖ್ಯವಾಗಿ ಸೋಲು ಮತ್ತು ಟೀಕೆಗಳ ಭಯ ತೊಡೆದು ಸಾಕ್ಷಿಪ್ರಜ್ಞೆಯ ಮೂಲಕ ಪ್ರಯತ್ನಿಸಬೇಕು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ದಿವ್ಯತೆ ಇದೆ. ಯಾರೂ ನಿರುಪಯುಕ್ತರಲ್ಲ. ನಿರಂತರ ಪ್ರಯತ್ನಶೀಲರಾಗಿ ಸೋಲು ಒಪ್ಪಿಕೊಳ್ಳದೆ ಮುಂದುವರಿಯಬೇಕು ಎಂದರು.
ಪ್ರತಿಯೊಬ್ಬ ಮನುಷ್ಯನ ಆಂತರ್ಯದಲ್ಲಿ ಪರಿಪೂರ್ಣತೆ ಇದೆ. ಆದರೆ, ಅದು ಪ್ರಕಾಶಿಸಲು ನೈತಿಕ ಚೌಕಟ್ಟಿನೊಳಗೆ ಸರಿಯಾದ ಮಾರ್ಗದಲ್ಲಿ ಕ್ರಮಿಸಬೇಕು. `ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ' ಎಂಬ ಸ್ವಾಮಿ ವಿವೇಕಾನಂದರ ಮಾತಿನಂತೆ ಯುವಜನತೆ ದೌರ್ಬಲ್ಯಗಳನ್ನು ತ್ಯಜಿಸಬೇಕು. ಒಳ್ಳೆಯ ಅರಿವು, ವಿವೇಚನೆಗಳ ಜೊತೆಗೆ ಬಲಶಾಲಿಗಳಾಗಬೇಕು ಎಂದು ಕರೆ ನೀಡಿದರು.
ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ. ಕೆ. ಶ್ರೀಧರ ಪೈ ಅಧ್ಯಕ್ಷತೆ ವಹಿಸಿದ್ದರು. ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ, ಉಪಪ್ರಾಂಶುಪಾಲ ಡಾ. ವಿಶ್ವನಾಥ ಪೈ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ ನಾಯ್ಕ, ಪದವಿ ಪೂರ್ವ ಪ್ರಾಂಶುಪಾಲೆ ಪ್ರೊ.ಮಾಲತಿದೇವಿ ಉಪಸ್ಥಿತರಿದ್ದರು.
ವಿವೇಕಾನಂದ ಚಿಂತನ ವೇದಿಕೆ ಸಂಚಾಲಕ ವಿನೀತ್ ರಾವ್ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು. ಸಂಧ್ಯಾ ಕಾಲೇಜಿನ ವಿದ್ಯಾರ್ಥಿನಿ ಭೂಮಿಕಾ ಪ್ರಾರ್ಥಿಸಿದರು.
