ಲೋಕಬಂಧು ನ್ಯೂಸ್ ಉಡುಪಿ. ಏ.2
ದ.ಕ. ಜಿಲ್ಲೆಯ ನೆಲ್ಯಾಡಿ ಮೂಲದ ಸುದೀಪ್ ರೈ ಕೆಲವು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತರಾಗಿದ್ದು, ಆ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ಉಡುಪಿ ಜಿಲ್ಲಾ ಘಟಕ ವತಿಯಿಂದ ಗರುವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕ.ರ.ವೇ. ಜಿಲ್ಲಾ ಗೌರವಾಧ್ಯಕ್ಷ ಅನ್ಸಾರ್ ಅಹಮದ್, ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಾಣುತ್ತಿದ್ದರೂ ಈ ಸಾವಿನ ಬಗ್ಗೆ ಹಲವಾರು ಊಹಾಪೋಹಗಳು ಕೇಳಿಬರುತ್ತಿವೆ. ಸುದೀಪ್ ಅವರನ್ನು ಮೊದಲು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಸಂದರ್ಭದಲ್ಲಿ ನಾನು ಮೂರು ದಿನ ಸತತ ಸುದೀಪ್ ಸಂಪರ್ಕದಲ್ಲಿದ್ದೆ. ಈ ಸಂದರ್ಭದಲ್ಲಿ ಅವರು ತನ್ನ ಹೆಂಡತಿ, ತಾಯಿಯೊಂದಿಗೆ ನಡೆದುಕೊಂಡ ರೀತಿ ಹಾಗೂ ತನಗೆ ನೀಡುತ್ತಿರುವ ಮಾನಸಿಕ ಕಿರುಕುಳ ಹಾಗೂ ಮಾಡಿರುವ ಮೋಸದ ಬಗ್ಗೆ ತಿಳಿಸಿದ್ದಾರೆ. ತಾನೇ ವಿಷ ಸೇವಿಸಿರುವ ಬಗ್ಗೆ ಯಾವತ್ತೂ ಹೇಳಿಕೊಂಡಿಲ್ಲ. ಹಾಗಾಗಿ ಈ ಸಾವಿನ ಬಗ್ಗೆ ಸಂಶಯ ಮೂಡುತ್ತದೆ ಎಂದರು.
ಈ ಸಂದರ್ಭದಲ್ಲಿ ಕರವೇ ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಶೇರಿಗಾರ್ತಿ, ಉಪಾಧ್ಯಕ್ಷೆ ದೇವಕಿ ಬಾರ್ಕೂರು, ಜಿಲ್ಲಾ ಘಟಕದ ಉಪಾಧ್ಯಕ್ಷ ಅಲ್ಫೋನ್ಸ್ ಮಿನೇಜಸ್, ಸಲಹೆಗಾರ್ತಿ ಸವಿತಾ ಹಾಗೂ ಸಂಘಟನೆಯ ಪ್ರಮುಖರಾದ ನಾಗರಾಜ್, ಧರ್ಮ ಮತ್ತು ಪಾಂಡು ಇದ್ದರು