ಲೋಕಬಂಧು ನ್ಯೂಸ್ ಉಡುಪಿ, ಮಾ.20
ಜಿಲ್ಲೆಯ ಬ್ಯಾಂಕುಗಳು ಆರ್ಥಿಕ ವರ್ಷದಲ್ಲಿ ಆರ್.ಬಿ.ಐ ಮಾರ್ಗಸೂಚಿಯನ್ವಯ ನೀಡಿರುವ ಗುರಿ ಸಾಧನೆಯನ್ನು ಆದ್ಯತೆಯ ಮೇಲೆ ಕೈಗೊಳ್ಳುವಂತೆ ಆರ್.ಬಿ.ಐ ಎ.ಜಿ.ಎಂ ನಿಶಾ ಠಾಕೂರ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಣಿಪಾಲದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾ.18ರಂದು ಬುಧವಾರ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೆಬ್ರಿ ತಾಲೂಕಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ವ್ಯವಹಾರ ಹಾಗೂ ಬ್ಯಾಂಕ್‌ಗಳ ಶಾಖೆಗಳ ಸಂಖ್ಯೆ ಕಡಿಮೆ ಇದೆ. ಆ ವ್ಯಾಪ್ತಿಯ ಬ್ಯಾಂಕ್ ಅಧಿಕಾರಿಗಳು ವ್ಯವಹಾರ ಹೆಚ್ಚಿಸಲು ಗಮನಹರಿಸಬೇಕು. ಬ್ಯಾಂಕಿನಿಂದ ದೊರೆಯುವ ಸಾಲ, ಸಹಾಯಧನ ಸೌಲಭ್ಯಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸುವುದರೊಂದಿಗೆ ಬ್ಯಾಂಕಿಂಗ್ ವ್ಯವಹಾರದ ವಿಸ್ತರಣೆಗೆ ಮುಂದಾಗಬೇಕು ಎಂದರು.
ಬ್ಯಾಂಕಿಂಗ್ ಠೇವಣಿ ಅನುಪಾತ ಕಳೆದ ಬಾರಿ ಶೇ.48.47 ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ.49.54ರಷ್ಟು ಹೆಚ್ಚಳವಾಗುವುದರೊಂದಿಗೆ ಶೇ.1.07ರಷ್ಟು ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗದರ್ಶನದಂತೆ ಸಿ.ಡಿ ಅನುಪಾತ ಹೆಚ್ಚಿಸಲು ಎಲ್ಲಾ ಬ್ಯಾಂಕ್ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳಿಗೆ ಬ್ಯಾಂಕ್‌ಗಳ ಕೊಡುಗೆ ಉತ್ತಮವಾಗಿದ್ದು, ಅದು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಯಬೇಕು. ಜಿಲ್ಲೆಯ ಯುವ ಉದ್ಯೋಗಾಸಕ್ತರಿಗೆ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ನಿಗದಿತ ಗುರಿ ಮೀರಿ 165 ಫಲಾನುಭವಿಗಳಿಗೆ 6.59 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ ಎಂದರು.
ಪಿ.ಎಂ.ವಿಶ್ವಕರ್ಮ ಯೋಜನೆಯಡಿ 5865 ಅರ್ಜಿ ಸ್ವೀಕೃತವಾಗಿದ್ದು 1,345 ಅರ್ಜಿ ತಿರಸ್ಕೃತಗೊಂಡು 4,028 ಫಲಾನುಭವಿಗಳಿಗೆ 36.65 ಕೋಟಿ ರೂ. ಸಾಲ ವಿತರಿಸಲಾಗಿದೆ. ತಿರಸ್ಕೃತ ಅರ್ಜಿಗಳ ಸಂಖ್ಯೆ ಕಡಿಮೆಯಾಗಬೇಕು ಎಂದ ಅವರು, ಯೋಜನೆಯಡಿ ಸ್ವೀಕೃತವಾದ ಎಲ್ಲಾ ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಿ ಅರ್ಹ ಫಲಾನುಭವಿ ಉದ್ಯಮಿಗಳಿಗೆ ಸಬ್ಸಿಡಿಯನ್ನು ಶೀಘ್ರವಾಗಿ ವಿತರಿಸುವಂತೆ ಸೂಚನೆ ನೀಡಿದರು.
ಪಿ.ಎಂ.ಎಫ್.ಎಂ.ಇ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 154 ಫಲಾನುಭವಿಗಳಿಗೆ 20.53 ಕೋಟಿ ರೂ. ಹಾಗೂ ಪಿ.ಎಂ.ಎಸ್.ಜಿ.ಎಂ.ಬಿ.ವೈ ಅಡಿಯಲ್ಲಿ ಬ್ಯಾಂಕುಗಳು 444 ಫಲಾನುಭವಿಗಳಿಗೆ 9.05 ಕೋಟಿ ರೂ. ಆರ್ಥಿಕ ನೆರವು ಮಂಜೂರು ಮಾಡಲಾಗಿದೆ. ಶಿಕ್ಷಣ ವಲಯದಲ್ಲಿ ಆರ್ಥಿಕ ನೆರವು ನೀಡುವ ಪ್ರಮಾಣ ಹೆಚ್ಚಾಗಬೇಕು. ಬ್ಯಾಂಕ್ ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಬ್ಯಾಂಕುಗಳಲ್ಲಿ ಲಭ್ಯವಿರುವ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಶಿಬಿರ ಆಯೋಜಿಸಬೇಕು ಎಂದರು.
ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ-1ರ ರೀಜನಲ್ ಮ್ಯಾನೇಜರ್ ತದಿನಾಡ ಶ್ರೀನಾಗ ಪೂರ್ಣಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ವಿಜಯ್ ಕುಮಾರ್, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಾಜೇಶ್ ಶೆಟ್ಟಿ, ರುಡ್ ಸೆಟ್ ನಿರ್ದೇಶಕ ಡಾ. ಬೊಮ್ಮಾಯಿ ಮೊದಲಾದವರಿದ್ದರು.