ಚೂರಿ ಇರಿತ ಪ್ರಕರಣ: ನಾಲ್ವರ ಬಂಧನ

ಲೋಕಬಂಧು ನ್ಯೂಸ್, ಉಡುಪಿ
ಹಿಂದೂ ಯುವಸೇನೆ ಮುಖಂಡ ಮಂಜು ಕೊಳ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿ ಆರೋಪಿಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಅಮೃತ್ ಭಂಡಾರಿ (22), ಪೃಜೇಶ್ (22), ಪುನೀತ್ ಪೂಜಾರಿ (24) ಹಾಗೂ ಅಭಿಜಿತ್ (20) ಬಂಧಿತರು.ಮಂಗಳವಾರ ರಾತ್ರಿ ಅಮೃತ್ ಭಂಡಾರಿ, ಪೃಜೇಶ್, ಪುನೀತ್ ಪೂಜಾರಿ ಹಾಗೂ ಅಭಿಜಿತ್ ಎಂಬವರು ಅಪ್ರಾಪ್ತ ಬಾಲಕನೊಂದಿಗೆ ಬಿಳಿ ಬಣ್ಣದ ಬೊಲೆರೊ ವಾಹನದಲ್ಲಿ ಬಂದು, ಮಲ್ಪೆ ಬೀಚ್ ಸಮೀಪದ ಬ್ಲೂ ವೇಲ್ಸ್ ಗೆಸ್ಟ್ ಹೌಸ್ ಬಳಿ ಕುಳಿತಿದ್ದ ಸಂತೋಷ್ ಎ. ಅಮೀನ್ ಹಾಗೂ ಅವರ ಸ್ನೇಹಿತರಾದ ಮಂಜುನಾಥ ಸಾಲಿಯಾನ್ (ಮಂಜು ಕೊಳ), ಧನುಷ್, ಲತೀಶ್ ಮತ್ತು ವರುಣ್ ಅವರೊಂದಿಗೆ ಅಮೃತ್ ಭಂಡಾರಿ ತಂಗಿಯ ಪ್ರೇಮ ಪ್ರಕರಣ ವಿಚಾರವಾಗಿ ತಗಾದೆ ತೆಗೆದಿದ್ದರು ಎನ್ನಲಾಗಿದೆ. ಆ ವೇಳೆ ಮಾತಿನ ಚಕಮಕಿ ತೀವ್ರಗೊಂಡು ಮಂಜು ಕೊಳ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ನಡೆಸಲಾಗಿದೆ.


ಆರೋಪಿ ಪೃಜೇಶ್ ಚಾಕುವಿನಿಂದ ಮಂಜು ಕೊಳ ಅವರ ಹೊಟ್ಟೆಯ ಎಡಭಾಗಕ್ಕೆ ಇರಿದಿದ್ದಾನೆ. ಅಲ್ಲದೆ ವರುಣ್ ಹಾಗೂ ಲತೀಶ್ ಅವರಿಗೂ ಚಾಕುನಿಂದ ಗಾಯಗೊಳಿಸಲಾಗಿದ್ದು, ತಡೆಯಲು ಬಂದ ಸಂತೋಷ್, ಧನುಷ್ ಸೇರಿದಂತೆ ಇತರರಿಗೂ ಹಲ್ಲೆ ನಡೆಸಿ, ಬೆದರಿಕೆ ಹಾಕಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಆ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಈರಣ್ಣ ಶಿರಗುಂಪಿ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದು, ಅಪ್ರಾಪ್ತ ಬಾಲಕನನ್ನು ಬಾಲನ್ಯಾಯ ಮಂಡಳಿಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಹಾಗೂ ಸಿಪಿಐ ರಾಮಚಂದ್ರ ನಾಯಕ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.