ಉಡುಪಿ: ಶ್ರೀ ರೇಣುಕಾಚಾರ್ಯ, ಯೋಗಿ ನಾರೇಯಣ ಯತೀಂದ್ರ ಸೇರಿದಂತೆ ಹಲವಾರು ದಾರ್ಶನಿಕರು ಸರಳ ಜೀವನ ನಡೆಸುವುದರೊಂದಿಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜ ಸುಧಾರಣೆಗೆ ಮಾರ್ಗದರ್ಶನ ನೀಡಿದ್ದಾರೆ. ಅಂಥ ಮಹನೀಯರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಿದಲ್ಲಿ ಮೌಲ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಶ್ರೀ ರೇಣುಕಾಚಾರ್ಯ ಜಯಂತಿ ಮತ್ತು ಯೋಗಿ ನಾರೇಯಣ ಯತೀಂದ್ರ ಜಯಂತಿ (ಕೈವಾರ ತಾತಯ್ಯ) ಕಾರ್ಯಕ್ರಮ ಉದ್ಘಾಟಿಸಿ, ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಶ್ರೀ ರೇಣುಕಾಚಾರ್ಯ, ಯೋಗಿ ನಾರೇಯಣ ಯತೀಂದ್ರ ಮತ್ತಿತರ ಮಹನೀಯರು ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳ ಸ್ಮರಣೆಗಾಗಿ ಹಾಗೂ ಮುಂದಿನ ಪೀಳಿಗೆಗೆ ಅವರ ಜೀವನಾದರ್ಶ ತಿಳಿಸುವ ಸಲುವಾಗಿ ಜಯಂತಿ ಕಾರ್ಯಕ್ರಮಗಳನ್ನು ಸರಕಾರದ ವತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಮಹನೀಯರು ನೀಡಿದ ಸಂದೇಶಗಳು ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಲಿದ್ದು, ಅವುಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.
ರೇಣುಕಾಚಾರ್ಯ ಹಾಗೂ ಕೈವಾರ ತಾತಯ್ಯ ಬದುಕಿನಲ್ಲಿ ಕಂಡುಕೊಂಡಿದ್ದ ಸತ್ಯಗಳಿಂದಲೇ ಜಗತ್ತನ್ನು ಉದ್ಧಾರ ಮಾಡಲು ಪ್ರಯತ್ನಿಸಿದ್ದರು. ತಮ್ಮದೇ ಶೈಲಿಯಲ್ಲಿ ಸಮಾಜ ಸುಧಾರಣೆಯ ಮಾರ್ಗ ಕಂಡುಕೊಂಡಿದ್ದರು. ಪ್ರತಿಯೊಬ್ಬರಲ್ಲೂ ಇತರರ ಬಗ್ಗೆ ಒಳ್ಳೆಯ ಭಾವನೆ ಹೊಂದಿರಬೇಕು. ಮಕ್ಕಳು ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸಿ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜೊತೆಗೆ ಉತ್ತಮ ಕೌಶಲ ಮೈಗೂಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಚಿಂತನೆ ನಡೆಸಬೇಕು ಎಂದರು.
ಕಾರ್ಕಳ ಭುವನೇಂದ್ರ ಕಾಲೇಜಿನ ಉಪನ್ಯಾಸಕಿ ಸುಲೋಚನ ಪಚ್ಚಿನಡ್ಕ ಉಪನ್ಯಾಸ ನೀಡಿ, 18ನೇ ಶತಮಾನದ ಕಾಲಜ್ಞಾನಿ ಯೋಗಿ ನಾರೇಯಣ ಯತೀಂದ್ರ ಸಾಂಸಾರಿಕ ಜೀವನದಲ್ಲಿ ನಡೆದ ಕಹಿ ಘಟನೆಯಿಂದ ಬೇಸತ್ತು ಆಧ್ಯಾತ್ಮದತ್ತ ಮುಖಮಾಡಿ ಕನ್ನಡ ಮತ್ತು ತೆಲುಗಿನಲ್ಲಿ ಭಕ್ತಿ ಗೀತೆಗಳು, ತತ್ವಪದಗಳು ಮತ್ತು ಭವಿಷ್ಯವಾಣಿ (ಕಾಲಜ್ಞಾನ) ರಚಿಸುವುದರೊಂದಿಗೆ ಸುದೀರ್ಘ 110 ವರ್ಷ ಕಾಲ ಬದುಕುವುದರೊಂದಿಗೆ ಕೈವಾರ ತಾತಯ್ಯನಾಗಿ ಸಮಾಜಕ್ಕೆ ಭಕ್ತಿ ಮತ್ತು ಮಾನವೀಯತೆ ಬೋಧಿಸಿ ಪವಾಡ ಪುರುಷರು ಎಂದೆನಿಸಿಕೊಂಡಿದ್ದಾರೆ.
ವೀರಶೈವ ಧರ್ಮದ ಮಹಾನ್ ಶರಣ ಮತ್ತು ಗುರುಗಳಲ್ಲಿ ಒಬ್ಬರಾದ ರೇಣುಕಾಚಾರ್ಯ ಸುಮಾರು 900-1000 ವರ್ಷಗಳ ಹಿಂದೆ ಬದುಕಿದ್ದರು ಎಂದು ದಾಖಲೆಗಳು ತಿಳಿಸುತ್ತವೆ. ಅವರ ತತ್ವ, ಬದುಕಿನ ಚರಿತ್ರೆ ಮತ್ತು ಧಾರ್ಮಿಕ ಸಾಧನೆಗಳು ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಮಹತ್ವಪೂರ್ಣ ಸ್ಥಾನ ಪಡೆದಿವೆ. ಲಿಂಗಾಯತ ಧರ್ಮದ ಸಿದ್ಧಾಂತ ಪ್ರತಿಪಾದಿಸಲು ಮತ್ತು ಶೈವ ಪರಂಪರೆಯನ್ನು ಬಲಪಡಿಸಲು ಜೀವನವನ್ನು ಮೀಸಲಾಗಿಟ್ಟಿದ್ದರು ಎಂದರು.
ಉಪ ತಹಶೀಲ್ದಾರ್'ಗಳಾದ ನವನೀತ್ ಮತ್ತು ಜಯಲಕ್ಷ್ಮೀ, ಸಮುದಾಯದ ಸದಸ್ಯರು, ಜಿಲ್ಲಾಡಳಿತದ ಸಿಬ್ಬಂದಿ ಮೊದಲಾದವರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಸಿಬ್ಬಂದಿ ವರ್ಷಾ ಬಿ. ಕೋಟ್ಯಾನ್ ನಿರೂಪಿಸಿದರು. ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯ ಚಿಕ್ಕಮಠ ವಂದಿಸಿದರು.