ಡಿಜಿಟಲ್ ಪಾಲಿಸಿ ಸ್ವಾಗತಾರ್ಹ

ಉಡುಪಿ | ಲೋಕಬಂಧು ನ್ಯೂಸ್
16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರಿ, ರಾಜ್ಯ ಸರ್ಕಾರ ಡಿಜಿಟಲ್ ಪಾಲಿಸಿ ರೂಪಿಸಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮ ಎಂದು ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಈ ವಿಚಾರ ಪ್ರಸ್ತಾಪಿಸಿರುವ ಪ್ರತಿಕ್ರಿಯಿಸಿದ ಅವರು, ಮನೋವೈದ್ಯನಾಗಿ ಸರ್ಕಾರದ ಈ ತೀರ್ಮಾನವನ್ನು ಸ್ವಾಗತಿಸುತ್ತೇನೆ.


ಇತ್ತೀಚೆಗೆ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಅತಿಯಾದ ಬಳಕೆಯಿಂದ ಮಕ್ಕಳ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ. ಮಾನಸಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ನಿತ್ಯ ಇಬ್ಬರು 18 ವರ್ಷದೊಳಗಿನ ಮಕ್ಕಳು ದಾಖಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.


ಸಾಮಾಜಿಕ ಜಾಲತಾಣಗಳ ಮೂಲಕ ಅಪರಿಚಿತರಿಂದ ಮೋಸ ಹೋಗುವ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದೆ. ಆದ್ದರಿಂದ ಸರ್ಕಾರದ ಈ ನಿರ್ಧಾರ ಸಮಯೋಚಿತ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಆದರೆ, ಈ ನಿಯಮವನ್ನು ಜಾರಿಗೆ ತರುವುದು ಸುಲಭವಲ್ಲ. 18 ವರ್ಷದೊಳಗಿನವರಿಗೆ ಬೀಡಿ- ಸಿಗರೇಟು ಮಾರಾಟ ನಿಷೇಧಿಸುವ ಕಾನೂನು ಇದ್ದರೂ ಅದು ಎಷ್ಟರ ಮಟ್ಟಿಗೆ ಜಾರಿಯಾಗಿದೆ ಎಂಬುದೂ ಪ್ರಶ್ನೆಯಾಗಿಯೇ ಉಳಿದಿದೆ. ಅದೇ ರೀತಿ ಮೊಬೈಲ್ ಫೋನ್ ಖಾಸಗಿ ಸ್ವತ್ತು ಆಗಿರುವುದರಿಂದ ಮಕ್ಕಳು ಅದರಲ್ಲಿ ಏನು ನೋಡುತ್ತಾರೆ ಎಂಬುದನ್ನು ನಿಯಂತ್ರಿಸುವುದು ಕಷ್ಟಕರ.


ಈ ಸಮಸ್ಯೆ ನಿಯಂತ್ರಿಸಲು ಪೋಷಕರು ಹಾಗೂ ಶಾಲಾಡಳಿತದ ಸಹಕಾರ ಅತ್ಯಗತ್ಯ. ಈಗಾಗಲೇ ಕೆಲವು ಪ್ರತಿಷ್ಠಿತ ಶಾಲೆಗಳು ಮೊಬೈಲ್ ಫೋನ್‌ಗಳನ್ನು ಶಾಲೆಗೆ ತರಲು ಅವಕಾಶ ನೀಡುವುದಿಲ್ಲ. ಸರ್ಕಾರಿ ಶಾಲೆಗಳಲ್ಲೂ ಶಾಲಾವಧಿಯಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಆದರೆ, ಶಾಲೆಯ ಹೊರಗಡೆ ನಿಯಂತ್ರಣ ಹಾಕುವುದು ಸವಾಲಿನ ಸಂಗತಿ ಎಂದು ಡಾ. ಭಂಡಾರಿ ತಿಳಿಸಿದ್ದಾರೆ.