ಬಜೆಟ್‌ನಲ್ಲಿ ಕೃಷಿಗೆ ಉತ್ತೇಜನ

ಬೆಂಗಳೂರು | ಲೋಕಬಂಧು ನ್ಯೂಸ್
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ (ಮಾರ್ಚ್ 6) ಮಂಡಿಸಿದ 17ನೇ ದಾಖಲೆಯ ಬಜೆಟ್‌ನಲ್ಲಿ ಕೃಷಿಗೆ ಉತ್ತೇಜನ ನೀಡಲಾಗಿದೆ.
ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ
ರೈತರ ಆದಾಯ ಹೆಚ್ಚಿಸಲು ಉತ್ಪಾದನೋತ್ತರ ಕೃಷಿ ಚಟುವಟಿಕೆಗಳನ್ನು ಬಲಪಡಿಸುವ ಉದ್ದೇಶದಿಂದ ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 'ಮುಖ್ಯಮಂತ್ರಿ ಕೃಷಿ ವಿಸ್ತಾರ' ಯೋಜನೆ ಜಾರಿಗೆ ತರಲಾಗುತ್ತಿದೆ.


ಈ ಯೋಜನೆ ಮೂಲಕ ಕೃಷಿ ಉತ್ಪನ್ನಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರುಕಟ್ಟೆ ವ್ಯವಸ್ಥೆ ಸುಧಾರಿಸುವ ಮೂಲಕ ರೈತರಿಗೆ ಹೆಚ್ಚಿನ ಆದಾಯ ದೊರಕುವಂತೆ ಮಾಡುವ ಉದ್ದೇಶ ಹೊಂದಲಾಗಿದೆ.


ವಸುಧಾಮೃತ
ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಸರ್ಕಾರ ಮುಂದಿನ ಮೂರು ವರ್ಷಗಳಲ್ಲಿ 'ವಸುಧಾಮೃತ' ಕಾರ್ಯಕ್ರಮ ಜಾರಿಗೆ ತರಲು ನಿರ್ಧರಿಸಿದೆ. ಈ ಯೋಜನೆಯಡಿ ಮಣ್ಣಿನ ಆರೋಗ್ಯ, ಜೈವಿಕ ಕೃಷಿಗೆ ಉತ್ತೇಜನ ಹಾಗೂ ರಾಸಾಯನಿಕಗಳ ಬಳಕೆ ಕಡಿಮೆ ಮಾಡುವ ಕ್ರಮಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ.


ಸಸ್ಯ ಸಂಜೀವಿನಿ ಯೋಜನೆ
ಬೆಳೆಗಳನ್ನು ಕೀಟ ಹಾಗೂ ರೋಗಗಳಿಂದ ರಕ್ಷಿಸಲು ರೈತರಿಗೆ ಅಗತ್ಯ ಮಾಹಿತಿ ಒದಗಿಸಲು 'ಸಸ್ಯ ಸಂಜೀವಿನಿ' ಯೋಜನೆ ಜಾರಿಗೆ ತರಲಾಗುತ್ತದೆ. ಆ ಮೂಲಕ ಜೈವಿಕ ಕೀಟನಾಶಕಗಳ ಬಳಕೆ, ಬೆಳೆ ರೋಗ ನಿರ್ವಹಣೆ, ಸುರಕ್ಷಿತ ಕೃಷಿ ವಿಧಾನಗಳ ಮಾಹಿತಿ, ರೈತರಿಗೆ ಸಮಯಕ್ಕೆ ಸರಿಯಾಗಿ ತಲುಪುವಂತೆ ವ್ಯವಸ್ಥೆ ಮಾಡಲಾಗುತ್ತದೆ.


ಎಐ ಆಧಾರಿತ ರೈತ ಕರೆ ಕೇಂದ್ರ
ರೈತರಿಗೆ ಹವಾಮಾನ ಮಾಹಿತಿ, ಮಾರುಕಟ್ಟೆ ದರ, ಕೃಷಿ ತಾಂತ್ರಿಕತೆ ಹಾಗೂ ಸರ್ಕಾರದ ಯೋಜನೆಗಳ ವಿವರಗಳನ್ನು ಒಂದೇ ಸೂರಿನಡಿ ಒದಗಿಸಲು ಕೃಷಿ ಇಲಾಖೆಯ 'ರೈತ ಕರೆ ಕೇಂದ್ರ'ಗಳನ್ನು ಎಐ ತಂತ್ರಜ್ಞಾನದೊಂದಿಗೆ ಔನ್ನತ್ಯಕ್ಕೇರಿಸಲಾಗುವುದು ಎಂದು ಸರ್ಕಾರ ಘೋಷಿಸಿದೆ.


ಕೃಷಿ ತರಬೇತಿ ಕೇಂದ್ರಗಳ ಔನ್ನತ್ಯ
ಚಿತ್ರದುರ್ಗ ಜಿಲ್ಲೆಯ ಬಬ್ಬೂರು ಪ್ರದೇಶದಲ್ಲಿರುವ ಜಿಲ್ಲಾ ತರಬೇತಿ ಕೇಂದ್ರವನ್ನು ರಾಜ್ಯ ಮಟ್ಟದ 'ಕೃಷಿ ಉದ್ಯಮ ತರಬೇತಿ ಕೇಂದ್ರ'ವಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಅದರಿಂದ ಕೃಷಿ ಆಧಾರಿತ ಉದ್ಯಮಗಳ ಕುರಿತು ರೈತರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.


ಸಣ್ಣ ರೈತರಿಗೆ ಉಪಕರಣಗಳ ನೆರವು
ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಸ್ಥಳೀಯವಾಗಿ ಅಗತ್ಯವಿರುವ ಎತ್ತು ಚಾಲಿತ ಮತ್ತು ಕೈಚಾಲಿತ ಕೃಷಿ ಉಪಕರಣಗಳನ್ನು ಕೃಷಿ ಯಾಂತ್ರೀಕರಣ ಯೋಜನೆಯಡಿ ಒದಗಿಸಲಾಗುತ್ತದೆ. ಅದರಿಂದ ಸಣ್ಣ ರೈತರಿಗೆ ಕೃಷಿ ವೆಚ್ಚ ಕಡಿಮೆ ಮಾಡುವಲ್ಲಿ ನೆರವಾಗಲಿದೆ.


ರೈತ ಮಾಲ್ ಸ್ಥಾಪನೆ
ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಒಂದೇ ಸ್ಥಳದಲ್ಲಿ ದೊರಕಿಸುವ ವ್ಯವಸ್ಥೆಗಾಗಿ ಪ್ರಾಯೋಗಿಕವಾಗಿ ಕೆಲಸ ಲಾರ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್‌ (ಎಂಎಸ್ಐಎಲ್) ವತಿಯಿಂದ 'ರೈತ ಮಾಲ್'ಗಳನ್ನು ಸ್ಥಾಪಿಸಲಾಗುತ್ತದೆ. ಈ ವ್ಯವಸ್ಥೆಯಿಂದ ರೈತರಿಗೆ ಕೃಷಿ ಸಾಮಗ್ರಿಗಳನ್ನು ಸುಲಭವಾಗಿ ಮತ್ತು ನಂಬಿಕೆಯಿಂದ ಪಡೆಯಲು ಸಹಾಯವಾಗಲಿದೆ.