ವಿವಿಧೆಡೆ ಖಾದಿ ಉಡುಪು ಮಾರಾಟ ಮಳಿಗೆ

ಲೋಕಬಂಧು ನ್ಯೂಸ್, ಉಡುಪಿ
ಖಾದಿ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಎಲ್ಲಾ ಸರಕಾರಿ ಮತ್ತು ಅನುದಾನಿತ ಸಂಸ್ಥೆಗಳು, ನಿಗಮ, ಮಂಡಳಿ, ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಅಧಿಕಾರಿ ಹಾಗೂ ನೌಕರರು ಸ್ವಯಂ ಪ್ರೇರಣೆಯಿಂದ ಪ್ರತೀ ತಿಂಗಳ ಮೊದಲ ಶನಿವಾರದಂದು ಖಾದಿ ಬಟ್ಟೆ ಧರಿಸುವಂತೆ ಹಾಗೂ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸೇರಿದಂತೆ ಎಲ್ಲಾ ಅಧಿಕೃತ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಖಾದಿ ಉಡುಪು ಧರಿಸುವಂತೆ ತಮ್ಮ ಇಲಾಖೆಗಳ ಅಧಿಕಾರಿ/ ಸಿಬ್ಬಂದಿಗಳಿಗೆ ನಿರ್ದೇಶನ ನೀಡಲು ಸೂಚಿಸಿದ್ದು, ಅದರಂತೆ ಸರಕಾರಿ ನೌಕರರಿಗೆ ಖಾದಿ ಬಟ್ಟೆ ಸುಲಭವಾಗಿ ಲಭಿಸುವಂತಾಗಲು ಮಾರ್ಚ್ 9ರಿಂದ 14ರ ವರೆಗೆ ಬೆಂಗಳೂರಿನ ರೂರಲ್ ರಿಸೋರ್ಸಸ್ ಡೆವಲಪ್ ಮೆಂಟ್ ಅಸೋಸಿಯೇಷನ್ ವತಿಯಿಂದ ಜಿಲ್ಲೆಯ ಆಯ್ದ ಕಡೆಗಳಲ್ಲಿ ತಾತ್ಕಾಲಿಕ ಮಳಿಗೆಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸಲು ವ್ಯವಸ್ಥೆ ಮಾಡಲಾಗಿದೆ.ಮಾ.9 ಮತ್ತು 10ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣ, ಮಾ.11ರಂದು ಬ್ರಹ್ಮಾವರ ಬಿ.ಆರ್.ಸಿ ಕಚೇರಿ ಆವರಣ, ಮಾ.12ರಂದು ಕುಂದಾಪುರ ಸರಕಾರಿ ನೌಕರರ ಭವನ, ಮಾ.13ರಂದು ಕಾರ್ಕಳ ಸರಕಾರಿ ನೌಕರರ ಭವನ ಹಾಗೂ ಮಾ.14ರಂದು ಬೈಂದೂರು ತಾಲೂಕು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ಮಳಿಗೆಗಳನ್ನು ತೆರೆಯಲಾಗುವುದು ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ