ಗೋವಿಂದ ಭಟ್ ನಿಧನಕ್ಕೆ ಹೆಗ್ಗಡೆ ಸಂತಾಪ

ಲೋಕಬಂಧು ನ್ಯೂಸ್ ಉಜಿರೆ, ಮಾ.21
ಯಕ್ಷಗಾನದ ಮೇರು ಕಲಾವಿದ ಕೆ.ಗೋವಿಂದ ಭಟ್ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ  ಸಂತಾಪ ಸೂಚಿಸಿದ್ದಾರೆ.ಅವರು ತಮ್ಮ ಶೋಕ ಸಂದೇಶದಲ್ಲಿ 'ಹಿರಿಯ ಯಕ್ಷಗಾನ ಕಲಾವಿದರಾಗಿ ಮೆರೆದ ಕೆ. ಗೋವಿಂದ ಭಟ್ ನಿಧನದ ಸುದ್ದಿ ತಿಳಿದು ವಿಷಾದವಾಯಿತು.


ನಮ್ಮ ಧರ್ಮಸ್ಥಳ ಮೇಳದಲ್ಲೆ 54 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಅವರು, ಹಿರಿಯ ಯಕ್ಷಗಾನ ಕಲಾವಿದರಾಗಿದ್ದ ಕುರಿಯ ವಿಠಲ ಶಾಸ್ತ್ರಿ ಅವರಲ್ಲಿ ಯಕ್ಷಗಾನ ಹಾಗೂ ನಾಟ್ಯದಲ್ಲಿ ತರಬೇತಿ, ಮಾರ್ಗದರ್ಶನ ಪಡೆದು ಪ್ರಬುದ್ಧ ಕಲಾವಿದರಾಗಿ ಮೆರೆದರು.


ಅವರ ಕೌರವ, ಬಾಹುಬಲಿ, ಇಂದ್ರಜಿತು, ಕರ್ಣ, ಅರ್ಜುನ, ದೇವೇಂದ್ರ ಮೊದಲಾದ ಪಾತ್ರಗಳು ಅವರಿಗೆ ವಿಶೇಷ ಮನ್ನಣೆ, ಗೌರವ ತಂದುಕೊಟ್ಟಿವೆ. ಪುರಾಣ ಪ್ರಸಂಗಗಳು ಹಾಗೂ ಯಕ್ಷಗಾನ, ಧರ್ಮ, ಕಲೆ, ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ ನಡೆಸಿದ ಅವರು ಅಪಾರ ಪಾಂಡಿತ್ಯ ಹಾಗೂ ಜ್ಞಾನ ಹೊಂದಿದ್ದರು.


ಅವರ ಉತ್ತಮ ವಾಕ್‌ಚಾತುರ್ಯ, ಪ್ರೌಢ ಅಭಿನಯ, ಪ್ರಬುದ್ಧ ವಿದ್ವತ್ಪೂರ್ಣ ಹಾಗೂ ಅರ್ಥಗರ್ಭಿತ ಮಾತುಗಳು ಪ್ರೇಕ್ಷಕರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿವೆ.


ಧರ್ಮಸ್ಥಳದಲ್ಲಿ ನಮ್ಮ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ತರಬೇತುದಾರರಾಗಿ, ಗುರುಗಳಾಗಿ ಸೇವೆ ಸಲ್ಲಿಸಿದ ಅವರು ಪುರಾಣ ವಾಚನ- ಪ್ರವಚನ, ಭಜನಾ ತರಬೇತಿಯಲ್ಲಿಯೂ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡುತ್ತಿದ್ದರು.


ಅವರ ನಿಧನ ನಿಜವಾದ ಅರ್ಥದಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವೇ ಆಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಅಗಲುವಿಕೆಯಿಂದ ಕುಟುಂಬ ವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ತಿಳಿಸಿದ್ದಾರೆ.