ಉಡುಪಿ: ಹಿಂದೂ ಸಂಘಟನೆಗಳ ಮುಖಂಡ, ಉಡುಪಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಪತಿ ಮಂಜು ಕೊಳ ಚೂರಿ ಇರಿತಕ್ಕೊಳಗಾಗಿದ್ದಾರೆ.ಪ್ರೀತಿ- ಪ್ರೇಮ ವಿಚಾರದಲ್ಲಿ ರಾಜಿ ಪಂಚಾಯತಿ ನಡೆಸಲು ತೆರಳಿದ್ದ ವೇಳೆ ಯುವಕರಿಬ್ಬರು ಮಲ್ಪೆಯಲ್ಲಿ ಮಂಗಳವಾರ ರಾತ್ರಿ ಚೂರಿಯಿಂದ ಇರಿದಿದ್ದಾರೆ.
ಮಾಹಿತಿಗಳ ಪ್ರಕಾರ ಮಂಜು ಕೊಳ ಅವರನ್ನು ಮಂಗಳವಾರ ಸಂಜೆ ಮಲ್ಪೆ ಬೀಚ್ ಬಳಿ ಪಲಿಮಾರು ಕಡೆಯ ಜೋಡಿಯೊಂದರ ಪ್ರೀತಿ- ಪ್ರೇಮ ವಿಚಾರದಲ್ಲಿ ರಾಜಿ ಪಂಚಾಯತಿ ನಡೆಸಲು ಬರಹೇಳಿದ್ದರು ಎನ್ನಲಾಗಿದೆ.
ಆ ವೇಳೆ ಪರಸ್ಪರ ಮಾತಿಗೆ ಮಾತು ಬೆಳೆದು ಯುವಕನೋರ್ವ ಮಂಜು ಕೊಳ ಅವರಿಗೆ ಚೂರಿ ಇರಿದಿದ್ದಾನೆ. ಹೊಟ್ಟೆಯ ಭಾಗಕ್ಕೆ ಇರಿದ ಪರಿಣಾಮ ಮಂಜು ಕೊಳ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೂರಿ ಇರಿದ ಯುವಕರ ಪೈಕಿ ಐವರನ್ನು ವಶಕ್ಕೆ ಪಡೆಯಲಾಗಿದೆ. ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿ ಘಟನೆ ನಡೆದಿದ್ದು, ಯಾವುದೇ ಕೋಮು ಸಂಘರ್ಷದ ಕಾರಣದಿಂದ ನಡೆದಿಲ್ಲ.
ಯಾವುದೇ ರೀತಿಯ ಗಾಳಿ ಸುದ್ದಿಗಳಿಗೆ ಅವಕಾಶ ನೀಡಬಾರದುಎಂದು ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.