ಲೋಕಬಂಧು ನ್ಯೂಸ್ | ಉಡುಪಿ, ಮಾ.14
ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿನ ಯುದ್ಧದಿಂದಾಗಿ ದೇಶದಲ್ಲಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಅದರಿಂದ ಹೋಟೆಲ್ ಉದ್ಯಮ ನಡೆಸುವವರಿಗೆ ತೊಂದರೆಯಾಗಿದ್ದು ಹೋಟೆಲ್ ಉದ್ಯಮ ಮುಂದುವರಿಸಲು ಪರ್ಯಾಯ ಉರುವಲುಗಳಾದ ಕಟ್ಟಿಗೆ ಹಾಗೂ ವಿದ್ಯುತ್ ಬಳಕೆಗೆ ಮುಂದಾಗುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೋಟೆಲ್ ಮಾಲಕರಿಗೆ ಸಲಹೆ ನೀಡಿದ್ದಾರೆ.
ವಾಣಿಜ್ಯ ಬಳಕೆ ಅನಿಲ ಸಿಲಿಂಡರ್ ಸರಬರಾಜು ಸಮಸ್ಯೆ ಕುರಿತು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾ.13ರಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೃಹ ಬಳಕೆ ಸಿಲಿಂಡರ್‌ಗಳ ಸರಬರಾಜಿನಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗಿಲ್ಲ. ವಾಣಿಜ್ಯ ಬಳಕೆಯ ಅನಿಲ ಹೊರ.ದೇಶಗಳಿಂದ ಪೂರ್ಣ ಪ್ರಮಾಣದಲ್ಲಿ ಆಮದಾಗುತ್ತಿದ್ದು, ಯುದ್ಧ ಭೀತಿಯಿಂದಾಗಿ ಅನಿಲ ಆಮದು ನಿಗದಿತ ಪ್ರಮಾಣದಲ್ಲಿ ಆಗದೇ ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದು ತಾತ್ಕಾಲಿಕ ಸಮಸ್ಯೆ ಆಗಿದ್ದು, ಪರ್ಯಾಯ ಉರುವಲು ಬಳಕೆಯೊಂದೇ ಪರಿಹಾರ ಎಂದರು.
ಈಗಾಗಲೇ ಜಿಲ್ಲೆಯಲ್ಲಿ ಕೆಲವು ಹೋಟೆಲ್ ಉದ್ಯಮಗಳು ಕಟ್ಟಿಗೆ ಮತ್ತಿತರ ಉರುವಲು ಬಳಸಿ ಆಹಾರ ಪದಾರ್ಥ ತಯಾರಿಸುತ್ತಿವೆ. ಜಿಲ್ಲೆಯ ಎಲ್ಲ ಹೋಟೆಲ್ ಉದ್ಯಮಗಳು ಇದಕ್ಕೆ ಒತ್ತುನೀಡುವುದರೊಂದಿಗೆ ಹೋಟೆಲ್ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಉದ್ಯೋಗವಕಾಶ ಮುಂದುವರಿಸುವುದು ಉತ್ತಮ. ಈಗ ಆಗಿರುವ ಅನಿಲ ವ್ಯತ್ಯಯ ತಾತ್ಕಾಲಿಕವಾಗಿದ್ದು, ಮುಂದೆ ಸಮಸ್ಯೆ ಸರಿಹೋಗಲಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಹೋಟೆಲ್ ಉದ್ಯಮದಲ್ಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಹೊರ ಜಿಲ್ಲೆ- ಹೊರ ರಾಜ್ಯಗಳಿಂದ ಆಗಮಿಸಿದ್ದಾರೆ. ಉದ್ಯಮದಲ್ಲಿ ವ್ಯತ್ಯಯ ಉಂಟಾಗಿ ಕಾರ್ಮಿಕರು ನಿರುದ್ಯೋಗಿಗಳಾಗಿ ಬೇರೆ ಉದ್ಯೋಗ ಅರಸಿ ಹೋದಲ್ಲಿ ಮುಂಬರುವ ದಿನಗಳಲ್ಲಿ ಹೋಟೆಲ್‌ಗಳಲ್ಲಿ ಕಾರ್ಮಿಕರ ಸಮಸ್ಯೆ ಉಂಟಾಗಲಿದೆ. ಹಾಗಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ 80ಕ್ಕೂ ಹೆಚ್ಚು ಸಾಮಿಲ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಹೋಟೆಲ್ ಉದ್ಯಮಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಕಟ್ಟಿಗೆ ಲಭ್ಯವಾಗುವಂತೆ ಸಹಕರಿಸಬೇಕು. ಹೋಟೆಲ್ ಉದ್ಯಮಿಗಳು ತಮ್ಮ ದೈನಂದಿನ ಚಟುವಟಿಕೆಗೆ ವಿದ್ಯುತ್ ಸ್ಟವ್ ಬಳಕೆಗೆ ಮುಂದಾದಲ್ಲಿ ಅಂಥವರಿಗೆ ಶೀಘ್ರ ವಿದ್ಯುತ್ ಸರಬರಾಜು ಮಾಡಿಕೊಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿ, ವಿದ್ಯುಚ್ಛಕ್ತಿ ಆಧರಿತ ಉಪಕಾರಣಗಳ ಬಳಕೆಗೆ ಅನುಕೂಲವಾಗುವಂತೆ ಅದರ ಉತ್ಪಾದಕರು ಸಹಕರಿಸಬೇಕು ಎಂದರು.
ಈ ಹಿಂದೆ ಸರಬರಾಜಾಗುತ್ತಿದ್ದ ವಾಣಿಜ್ಯ ಸಿಲಿಂಡರ್'ಗಳ ಶೇ.25ರಷ್ಟು ನೀಡಿದಲ್ಲಿ ಅನುಕೂಲವಾಗುತ್ತಿದೆ ಎಂಬ ಹೋಟೆಲ್ ಮಾಲಕರ ಸಂಘದವರ ಮನವಿ ಬಗ್ಗೆ ಸರಕಾರಕ್ಕೆ ಪತ್ರ ಬರೆದು ಆ ಬೇಡಿಕೆ ಪೂರೈಸಲ ಪ್ರಯತ್ನಿಸಲಾಗುವುದು ಎಂದರು.
ಸಾಮಿಲ್ ಮಾಲಕರ ಸಂಘದ ಪದಾಧಿಕಾರಿಗಳು ಮಾತನಾಡಿ, ಹೋಟೆಲ್ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬೆಲೆ ಏರಿಕೆ ಮಾಡದೇ ಪ್ರಸಕ್ತ ದರದಲ್ಲಿ ಸೌದೆ ಪೂರೈಸುವ ಭರವಸೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ರವೀಂದ್ರ, ಸಾಮಿಲ್ ಮಲಕರು ಮೊದಲಾದವರಿದ್ದರು.
