ಕಾರ್ಕಳ | ಲೋಕಬಂಧು ನ್ಯೂಸ್
ಸಿಎಂ ಸಿದ್ಧರಾಮಯ್ಯ ಮಂಡಿಸಿರುವ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಬೃಹತ್ ಶೂನ್ಯ ಬಜೆಟ್ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಹೊಸ ಹೊಸ ಪದಪುಂಜಗಳನ್ನು ಹೊಸೆಯಲು ಸಿದ್ದರಾಮಯ್ಯ ನೀಡಿದ ಆದ್ಯತೆಯನ್ನು ಹೊಸ ಹೊಸ ಯೋಜನೆಗಳ ಸೃಷ್ಟಿಗೆ ನೀಡದೇ ಇರುವುದು ರಾಜ್ಯದ ದೌರ್ಭಾಗ್ಯ.
ಈ ಬಾರಿಯ ಬಜೆಟ್‌ನ್ನು `11ಜಿ' ಮಾದರಿಯಲ್ಲಿ ರೂಪಿಸಲಾಗಿದೆ ಎಂದು ಸಿದ್ದರಾಮಯ್ಯನವರು ಬಜೆಟ್‌ನ ಪೂರ್ವಪೀಠಿಕೆಯಲ್ಲಿ ಹೆಮ್ಮೆಯಿಂದ ಹೇಳಿದ್ದಾರೆ. ಆದರೆ, ಇಲಾಖಾವಾರು ಬಜೆಟ್ ವಿಶ್ಲೇಷಣೆ ನಡೆಸಿದಾಗ ಇದು '11ಜಿ' ಬಜೆಟ್ ಬದಲಾಗಿ `11 ಲೈ' (ಹನ್ನೊಂದು ಸುಳ್ಳು) ಗಳ ಬಜೆಟ್ ಎಂದು ವಿಶ್ಲೇಷಿಸಬಹುದಾಗಿದೆ ಎಂದು ಸುನಿಲ್ ತಿಳಿಸಿದ್ದಾರೆ.
ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಾಣದ ಸಾಲದ ಹೊರೆಯನ್ನು ಸಿದ್ದರಾಮಯ್ಯ ಈ ಬಜೆಟ್ ಮೂಲಕ ಹೊರಿಸಿದ್ದಾರೆ. ಬರೋಬ್ಬರಿ 1,32,000 ಕೋಟಿ ರೂ. ಸಾಲ ಮಾಡಲಾಗಿದ್ದು, ರಾಜ್ಯದ ಒಟ್ಟು ಹೊಣೆಗಾರಿಕೆ 8,24,389 ಕೋಟಿ ರೂ.ಗೆ ಏರಿಕೆಯಾಗಿರುವುದು ಕಳವಳದ ಸಂಗತಿಯಾಗಿದ್ದು, ಬಂಡವಾಳ ವೆಚ್ಚವನ್ನು 74,682 ಕೋಟಿ ರೂ.ಗೆ ಇಳಿಕೆ ಮಾಡಲಾಗಿದೆ.
ಯಾವ ದೃಷ್ಟಿಯಿಂದ ನೋಡಿದರೂ ಇದು ವಿತ್ತೀಯ ಶಿಸ್ತಿನ ಪರಿಮಿತಿಯೊಳಗಿರುವ ಆಯ-ವ್ಯಯ ಎಂದು ಒಪ್ಪಿಕೊಳ್ಳಲು ಅಸಾಧ್ಯವಾಗಿದ್ದು, ರಾಜ್ಯದ ದೂರಗಾಮಿ ಭವಿಷ್ಯದ ದೃಷ್ಟಿಯಿಂದ ಅವಲೋಕಿಸಿದರೆ ಸಿದ್ದರಾಮಯ್ಯ ಕರ್ನಾಟಕವನ್ನು ತೀವ್ರ ತರವಾದ ಸಾಲದ ಮಡುವಿನಲ್ಲಿ ನೂಕುವ ರಭಸದಲ್ಲಿದ್ದಾರೆ ಎಂದು ಸುನಿಲ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ಕರಾವಳಿ ವಿರೋಧ
ಬಜೆಟ್‌ನ ಪ್ರತೀ ಪುಟದಲ್ಲಿ ಹುಡುಕಿದರೂ ಕರಾವಳಿ ಭಾಗದ ಅಭಿವೃದ್ಧಿಗೆ ಪೂರಕವಾದ ಒಂದೇ ಒಂದು ಅಂಶಗಳು ಈ ಬಜೆಟ್‌ನಲ್ಲಿ ಇಲ್ಲ. ಹೊಸ ವೈದ್ಯಕೀಯ ಕಾಲೇಜು ಬೇಡಿಕೆ ಈಡೇರಿಲ್ಲ. ಪಶ್ಚಿಮ ವಾಹಿನಿ ಯೋಜನೆಗಳಿಗೆ ಬಿಡಿಕಾಸು ಕೊಟ್ಟಿಲ್ಲ. ನಗರಾಭಿವೃದ್ಧಿ ಯೋಜನೆಗಳು ಬೆಂಗಳೂರು ಬಿಟ್ಟು ಆಚೆ ಆರದೇ ಇರುವುದು ಈ ಸರ್ಕಾರದ ಬಿಯಾಂಡ್ ಬೆಂಗಳೂರು ಯೋಜನೆಯ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಕರಾವಳಿಯ ಸಮಗ್ರ ಅಭಿವೃದ್ಧಿ, ಪ್ರತ್ಯೇಕ ಕೈಗಾರಿಕಾ ಕ್ಲಸ್ಟರ್, ಪ್ರವಾಸೋದ್ಯಮ ಬಗ್ಗೆ ಸ್ಪಷ್ಟತೆ, ಐಟಿ ಹೂಡಿಕೆ ಇತ್ಯಾದಿ ವಿಚಾರಗಳನ್ನು ನಿರೀಕ್ಷಿಸಲಾಗಿತ್ತು. ಹಾಗಾಗಿ ಇದು ಕರಾವಳಿ ವಿರೋಧಿ ಬಜೆಟ್ ಕೂಡಾ ಆಗಿದೆ ಎಂದು ಶಾಸಕ ಸುನಿಲ್ ಕುಮಾರ್ ತಿಳಿಸಿದ್ದಾರೆ.
