ಕಾಪು ಹೊಸಮಾರಿಗುಡಿ ದಿವ್ಯಸನ್ನಿಧಿ: ಸಪ್ತಮಾತೃಕಾಕಲ್ಪ ಮಹಾಯಾಗ ಸಂಪನ್ನ

ಕಾಪು: ಇಲ್ಲಿನ ಶ್ರೀ ಹೊಸಮಾರಿಗುಡಿ ದಿವ್ಯಕ್ಷೇತ್ರದಲ್ಲಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿ ಪುನಃಪ್ರತಿಷ್ಠಾ ಪ್ರಥಮ ವರ್ಧಂತಿ ಮಹೋತ್ಸವ ಅಂಗವಾಗಿ ನಡೆದ ಮಾತೃ ವೈಭವ ಉತ್ಸವ ಪ್ರಯುಕ್ತ ರವಿವಾರ ಶ್ರೀ ಸಪ್ತಮಾತೃಕಾಕಲ್ಪ ಮಹಾಯಾಗ ಸಂಪನ್ನಗೊಂಡಿತು.ಕ್ಷೇತ್ರದ ಪ್ರಧಾನ ತಂತ್ರಿ ಕೊರಂಗ್ರಪಾಡಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ ಸಹಯೋಗದೊಂದಿಗೆ ಸಪ್ತಮಾತೃಕಾ ಕಲ್ಪ ಮಹಾಯಾಗ, ಸಪ್ತಮಾತೃಕಾ ಬಲಿದಾನಮ್, ಮಹಾಪೂರ್ಣಾಹುತಿ, ಪ್ರಸಾದ ವಿತರಣೆ ಹಾಗೂ ಸಂಜೆ ವನದುರ್ಗಾಮಂತ್ರ ಹೋಮ, ವನದುರ್ಗಾಪೂಜಾ, ಯೋಗಿನೀಬಲಿ ನಡೆಯಿತು.ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಮಂದಿ ಶ್ರೀ ಕ್ಷೇತ್ರವನ್ನು ಸಂದರ್ಶಿಸಿದ್ದು ಹತ್ತು ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಮತ್ತು ಮಾತೃ ವೈಭವ ಸೇವಾ ಸಮಿತಿ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ರವಿ ಕಿರಣ್ ಮೊದಲಾದವರಿದ್ದರು.