'ಸಮಾಧಾನ ಮಹೋತ್ಸವ'ಕ್ಕೆ ಚಾಲನೆ‌

ಲೋಕಬಂಧು ನ್ಯೂಸ್ ಉಡುಪಿ, ಮಾ.20
ಸಮಾಧಾನ ಮಹೋತ್ಸವ ಹೃದಯಗಳ ಪರಿವರ್ತನೆ, ನಂಬಿಕೆಯ ನವೀಕರಣ ಮತ್ತು ಶಾಂತಿಯ ಅನುಭವಕ್ಕೆ ದೇವರು ನೀಡಿದ ಅಪೂರ್ವ ಅವಕಾಶ ಎಂದು ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಫಾ.ಡಾ|ಜೆರಾಲ್ಡ್ ಐಸಾಕ್ ಲೋಬೊ ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ಮಿಷನ್ ಕಂಪೌಂಡ್ ಮೈದಾನದಲ್ಲಿ ಉಡುಪಿ ಜಿಲ್ಲೆಯ ಫೆಲೋಶಿಪ್ ಚರ್ಚಸ್ ವತಿಯಿಂದ ಆಯೋಜಿಸಲಾಗಿರುವ ಮೂರು ದಿನಗಳ 'ಸಮಾಧಾನ ಮಹೋತ್ಸವ'ಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.


ಬೈಬಲ್ ಶಾಂತಿಯ ಆಳವಾದ ಅರ್ಥವನ್ನು ಬೋಧಿಸುತ್ತದೆ. ಏಸುಕ್ರಿಸ್ತನ ಜನನ ಸಂದರ್ಭದಲ್ಲಿಯೂ ಶಾಂತಿ ಸಮಾಧಾನದ ಉಲ್ಲೇಖವಿದ್ದು, ಅದು  ದೇವರು ಮಾನವ ಕುಲದ ಮೇಲೆ ತೋರಿದ ಪ್ರೀತಿಯ ಸಂಕೇತ. ಲೋಕದ ಶಾಂತಿ ತಾತ್ಕಾಲಿಕವಾದರೆ ಕ್ರಿಸ್ತನ ಶಾಂತಿ ಶಾಶ್ವತವಾದುದು. ಆದ್ದರಿಂದ ಶಾಂತಿಗಾಗಿ ಶ್ರಮಿಸವವರು ಸದಾ ಧನ್ಯರು ಎಂದು ಏಸುಕ್ರಿಸ್ತ ಹೇಳಿದ್ದು  ಅವರ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪಾಲಿಸೋಣ ಎಂದರು.


ಮುಖ್ಯ ಅಭ್ಯಾಗತರಾಗಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜ ಮಾತನಾಡಿ, ಪ್ರತಿಯೊಂದು ಧರ್ಮಗಳಿಗೂ ತಮ್ಮ ತಮ್ಮ ಆಚರಣೆಗಳಿಗೆ ದೇಶದಲ್ಲಿ ಮುಕ್ತ ಅವಕಾಶವಿದ್ದು ನಮ್ಮ ಧರ್ಮವನ್ನು ಪ್ರೀತಿಸುವುದರೊಂದಿಗೆ ಇತರ ಧರ್ಮಗಳನ್ನು ಗೌರವಿಸಿದಾಗ ಶಾಂತಿಯ ಸಂದೇಶ ಸಾರ್ಥಕತೆಯನ್ನು ಪಡೆಯುತ್ತದೆ ಎಂದರು.


ಸಿಎಸ್ಐ ಕರ್ನಾಟಕ ಸದರ್ನ್ ಡಯಾಸಿಸ್ ಧರ್ಮಾಧ್ಯಕ್ಷ ಫಾ.ಹೇಮಚಂದ್ರ ಕುಮಾರ್ ಮಾತನಾಡಿ, ಮೂರು ದಿನಗಳ ಸಮಾಧಾನ ಮಹೋತ್ಸವ ನಮ್ಮಲ್ಲಿನ ಆಧ್ಯಾತ್ಮಿಕ ಶಕ್ತಿಯನ್ನು ಬಲಗೊಳಿಸಲು ಸಹಕಾರಿಯಾಗಲಿ ಎಂದು ಹಾರೈಸಿದರು.


ಕಾರ್ಯಕ್ರಮಕ್ಕೂ ಮುನ್ನ ಸುಮಾರು 200ಕ್ಕೂ ಅಧಿಕ ಮಂದಿ ಗಾಯನ ತಂಡದ ನೇತೃತ್ವದಲ್ಲಿ ಸ್ತುತಿಗೀತೆಗಳ ಗಾಯನ ನಡೆಯಿತು.


ಕಾರ್ಯಕ್ರಮದಲ್ಲಿ ಮೂರು ದಿನಗಳ ಕಾಲ ಭಕ್ತಿ ಸಂಜೀವನ ಕೂಟ ನಡೆಸಿಕೊಡಲಿರುವ ಘನ ಮೋಹನ್ ಸಿ. ಲಾಝರಸ್,  ಪಾಸ್ಟರ್ ಟಿ. ವಿ. ಗೋಪಿನಾಥನ್, ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಸುಶೀಲ್ ಜತ್ತನ್ನ, ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರಶಾಂತ್ ಜತ್ತನ್ನ ವೇದಿಕೆಯಲ್ಲಿದ್ದರು.