ಲೋಕಬಂಧು ನ್ಯೂಸ್, ಉಡುಪಿ
ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಉಡುಪಿ ಸಮಿತಿ ಎಜುಕೇಶನಲ್ ಟ್ರಸ್ಟ್ ಅಂಗಸಂಸ್ಥೆ ಬಿಲ್ಲಾಡಿ ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರ ಹಾಗೂ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಮಂತ್ರಾಲಯ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವಿಭಾಗಿಯ ಕಚೇರಿ ಸಹಯೋಗದಲ್ಲಿ ಮಾರ್ಚ್ 17ರಂದು ಅಮೃತ್ ಗಾರ್ಡನ್ನಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಅಪ್ರೆಂಟಿಶಿಪ್ ಮೇಳ ಹಾಗೂ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.ಶುಕ್ರವಾರ (ಮಾರ್ಚ್ 6) ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, 80 ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ. 1,500ರಿಂದ 2,000 ಮಂದಿ ಉದ್ಯೋಗಾಕಾಂಕ್ಷಿಗಳ ನೇಮಕ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ ಎಂದರು.
ಪ್ರತೀ ಕಂಪನಿಗಳು ತಮ್ಮ ಉದ್ಯೋಗಿಗಳಲ್ಲಿ ಶೇ.2.5ರಷ್ಟು ಮಂದಿಯನ್ನು ಪ್ರತಿವರ್ಷ ಅಪ್ರೆಂಟಿಶಿಪ್ ನೇಮಕಾತಿಗೆ ಒಳಪಡಿಸುವಂತೆ ಕೇಂದ್ರ ಸರ್ಕಾರ ಕಾನೂನು ರಚಿಸಿದೆ. ಜೊತೆಗೆ ನೇಮಕವಾದ ಉದ್ಯೋಗಿಗಳಿಗೆ ಸಹಾಯಧನವನ್ನೂ ಮಂಜೂರು ಮಾಡಲಿದೆ. ಬೆಂಗಳೂರಿನಿಂದ ಕೌಶಲಾಭಿವೃದ್ಧಿ ಇಲಾಖೆ ನಿರ್ದೇಶಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಪ್ರೆಂಟಿಶಿಪ್ ಮೂಲಕ ನೇಮಕಗೊಂಡವರಿಗೆ ಒಂದು ವರ್ಷದ ತರಬೇತಿ ಬಳಿಕ ನೇರ ನೇಮಕಾತಿಗೆ ಅವಕಾಶವಿದೆ. ಹಾಗಾಗಿ ಉದ್ಯೋಗಾಕಾಂಕ್ಚಿಗಳು ಮೇಳದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಪ್ರಮುಖರಾದ ಮಹೇಶ್ ಠಾಕೂರ್, ರಘುನಾಥ ಮಾಬೇನ್, ಭಾಸ್ಕರ ಸುವರ್ಣ, ಸುಧಾಕರ ಅಮೀನ್, ರೂಪೇಶ್ ಕುಮಾರ್, ಓಬು ಪೂಜಾರಿ, ಗಣನಾಥ ಎಕ್ಕಾರು ಉಪಸ್ಥಿತರಿದ್ದರು.
ಸಾನ್ನಿಧ್ಯ ವಹಿಸಿದ್ದ ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಹೊರದೇಶಗಳಲ್ಲಿ ಅನುಭವವಿಲ್ಲದ ಮಂದಿಗೆ ಉದ್ಯೋಗ ಸಿಗುವುದಿಲ್ಲ. ಹಾಗಾಗಿ ಅಪ್ರೆಂಟಿಶಿಪ್ ಮೇಳದಿಂದ ಯುವಕರಿಗೆ ಅನುಕೂಲವಾಗಲಿದೆ. ತಾವು ಓದಿದ ಡಿಗ್ರಿಗೆ ಸರಿಯಾದ ಉದ್ಯೋಗ ಪಡೆಯಲು ಮೇಳದಲ್ಲಿ ಅವಕಾಶವಿದೆ.
ಕಳೆದ ವರ್ಷ ಉದ್ಯೋಗ ಮೇಳದಲ್ಲಿ 1,200 ಮಂದಿಗೆ ಉದ್ಯೋಗ ಲಭಿಸಿದ್ದು, ಈ ಬಾರಿ 2,000 ಮಂದಿ ಉದ್ಯೋಗಕ್ಕೆ ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ ಎಂದರು.